ಬೀದರ್: ಮದುವೆ ಯಾಕೆ ಮಾಡ್ತಿಲ್ಲ ಎಂದು ತನ್ನ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ್ದಕ್ಕೆ ಕೊಲೆ ಯತ್ನದ ಆರೋಪದಡಿ ಬಂಧಿಸಲ್ಪಟ್ಟಿದ್ದ ಯುವಕನೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಕಮಲನಗರ ಪಟ್ಟಣದ ಶ್ರೀಮಂತ ಗಾಯಕವಾಡ(25) ಎಂಬಾತ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಕೊಲೆ ಯತ್ನದ ಆರೋಪದ ಅಡಿಯಲ್ಲಿ ಕಮಲನಗರ ಪೊಲೀಸ್ ಕಸ್ಟಡಿಯಲ್ಲಿದ್ದ ಈತ ಮೂತ್ರ ವಿಸರ್ಜನೆ ನೆಪ ಮಾಡಿಕೊಂಡು ಹೊರಬಂದು ಜೊತೆಗಿದ್ದ ಪೊಲೀಸ್ ಕಾನ್ಸ್ಟೇಬಲ್ಗಳನ್ನು ತಳ್ಳಿ ಠಾಣೆಯ ಪಕ್ಕದಲ್ಲಿರುವ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.

ಹೈದರಾಬಾದ್ನಲ್ಲಿ ಕೆಲಸ ಮಾಡ್ತಿದ್ದ ಶ್ರೀಮಂತ ಗಾಯಕವಾಡ ಕಳೆದ ಲಾಕ್ ಡೌನ್ ವೇಳೆಯಲ್ಲಿ ಕಮಲನಗರಕ್ಕೆ ವಾಪಸ್ಸಾಗಿದ್ದ. ನನಗೆ ವಯಸ್ಸಾಗಿದೆ ಆದರೂ ಏಕೆ ಮದುವೆ ಮಾಡ್ತಿಲ್ಲ ಎಂದು ಕುಟುಂಬಸ್ಥರೊಂದಿಗೆ ಜಗಳ ಮಾಡಿದ್ದಾನೆ. ಈ ವೇಳೆ ಈತನ ಚಿಕ್ಕಪ್ಪ ಸಂಜೀವ್ ಕುಮಾರ್ ಗಾಯಕವಾಡ ಮೇಲೆ ಬ್ಲೇಡ್ನಿಂದ ದಾಳಿ ಮಾಡಿ ಗಾಯಗೊಳಿಸಿದ್ದ.
ಗಂಭೀರವಾಗಿ ಗಾಯಗೊಂಡ ಸಂಜೀವಕುಮಾರ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಮಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿ, ಯುವಕನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ರಾತ್ರಿ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ವಿಭಾಗದ ಐಜಿ ಮನಿಷ್ ಖರ್ಬೇಕರ್, ಎಸ್ಪಿ ನಾಗೇಶ್ ಡಿ.ಎಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೊಡಿ, ಡಿವೈಎಸ್ಪಿ ದೇವರಾಜ್ ಬಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.