ಬಸವಕಲ್ಯಾಣ (ಬೀದರ್): ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಹುಲಸೂರ ತಾಲೂಕಿನ ಮಿರಕಲ್ ಗ್ರಾಮದ ಓರ್ವ ಸೇರಿದಂತೆ ತಾಲೂಕಿನಲ್ಲಿ ಒಟ್ಟು 9 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಮಂಗಳವಾರ ಹುಲಸೂರ ತಾಲೂಕಿನ ಮಿರಕಲ್‌ನಲ್ಲಿ 1 ಸೇರಿದಂತೆ ತಾಲೂಕಿನಲ್ಲಿ ಮತ್ತೆ 9 ಜನರಲ್ಲಿ ಸೋಂಕು ಧೃಡಪಟ್ಟಿದ್ದು, ಉಜಳಂಬನಲ್ಲಿ 4, ಧಾಮುರಿಯಲ್ಲಿ 2 ಹಾಗೂ ರಾಜೋಳಾ ಗ್ರಾಮದಲ್ಲಿ 2 ಹೊಸ ಪ್ರಕರಣಗಳು ಪತ್ತೆಯಾಗಿದೆ.
ಹೊಸದಾಗಿ ಪತ್ತೆಯಾದವರ ಪೈಕಿ ಉಜಳಂಬನಲ್ಲಿ ಹಾಗೂ ರಾಜೋಳಾ ಗ್ರಾಮದ ಇಬ್ಬರು ಮಹಿಳೆಯರಿದ್ದು, ರಾಜೋಳಾ ಗ್ರಾಮದಲ್ಲಿ ಭಾನುವಾರ ಸೋಂಕು ಪತ್ತೆಯಾದ ಎರಡು ಮಕ್ಕಳ ತಂದೆ, ತಾಯಿಗೂ ಸೋಂಕು ಇರುವುದು ಮಂಗಳವಾರ ಧೃಡಪಟ್ಟಿದೆ.
ಸೋಂಕಿತರೆಲ್ಲರು ಮಹಾರಾಷ್ಟ್ರದಿಂದ ಮರಳಿ ಬಂದವರಾಗಿದ್ದು, ಸೋಂಕಿತರೆಲ್ಲರನ್ನು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59ಕ್ಕೆ ತಲುಪಿದಂತಾಗಿದ್ದು, ಇದರಲ್ಲಿ ಒಬ್ಬರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ಹಲವು ಹಳ್ಳಿಗಳಲ್ಲಿ ತಲ್ಲಣ ಸೃಷ್ಠಿಸಿದೆ. ತಾಲೂಕಿನ ಎಲ್ಲ ಭಾಗದಲ್ಲಿಯೂ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಒಂದೆಡೆಯಾದರೆ, ಇನ್ನು ಕ್ವಾರಂಟೈನ್ ಅವಧಿ ಮುಗಿದವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಮರಳಿದವರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ತಾಲೂಕಿನ ಜನರಲ್ಲಿ ಅತಂಕ ಹೆಚ್ಚಿಸುವಂತೆ ಮಾಡಿದೆ.