ಬಳ್ಳಾರಿ: ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದ್ದು, ನಗರದ ಉಪ - ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮೇ 1ರಂದು ಮಧ್ಯಾಹ್ನ 12.19ನಿಮಿಷಕ್ಕೆ ಬಿರು ಬಿಸಿಲಿದ್ದರೂ ನೆರಳು ಕಾಣಿಸದ ಸನ್ನಿವೇಶವು ಕಂಡು ಬಂದಿದ್ದು, ಕೆಲ ನಿಮಿಷಗಳ ಕಾಲ ನೆರಳು ಮೂಡದ ಸನ್ನಿವೇಶವನ್ನು ವಿಜ್ಞಾನ ಕೇಂದ್ರದ ಸಿಬ್ಬಂದಿಗಳೊಂದಿಗೆ ವೀಕ್ಷಿಸಲಾಯಿತು ಎಂದು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಜಿ.ವಿ ಶಿವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![zero shadow day in bellary](https://etvbharatimages.akamaized.net/etvbharat/prod-images/kn-03-bly-020420-sciencentrenews-ka10007_02052020175102_0205f_1588422062_22.jpg)
ಮೇ1 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆ 19 ನಿಮಿಷಕ್ಕೆ ‘ಝೀರೋ ಶಾಡೋ ಡೇ’ಶೂನ್ಯ ನೆರಳಿನ ವಿದ್ಯಮಾನವು ಕಂಡು ಬಂದಿತು. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಹೋಗುವ ವೇಳೆ ಮಾತ್ರ, ಈ ವಿದ್ಯಮಾನವನ್ನು ಕಾಣಬಹುದು. ಭೂಮಿಯು ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತ 23.5 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 23.5 ಡಿಗ್ರಿ ಉತ್ತರ ರೇಖಾಂಶಗಳ ನಡುವೆ ಹಾದು ಹೋಗುತ್ತದೆ. ಆಗ ಭೂಮಿಯಲ್ಲಿ ನೆರಳು ಗೋಚರಿಸುವುದಿಲ್ಲ.
![zero shadow day in bellary](https://etvbharatimages.akamaized.net/etvbharat/prod-images/kn-03-bly-020420-sciencentrenews-ka10007_02052020175102_0205f_1588422062_170.jpg)
ಕಟಕ ವೃತ್ತ ಮತ್ತು ಮಕರ ಸಂಕ್ರಾತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ಪ್ರತಿ ವರ್ಷವು ಎರಡು ಬಾರಿ ಈ ವಿದ್ಯಮಾನವನ್ನು ಕಾಣಬಹುದಾಗಿದೆ. ಅದರಂತೆ ಈ ವರ್ಷ ಮೊದಲನೆಯದಾಗಿ ಮೇ 1ರಂದು ಕಂಡು ಬಂದಿತು. ಮತ್ತೊಮ್ಮೆ ಆಗಸ್ಟ್ 9 ರಂದು ಮಧ್ಯಾಹ್ನ 12.28 ನಿಮಿಷಕ್ಕೆ ಈ ರೀತಿಯ ಶೂನ್ಯ ನೆರಳಿನ ವಿದ್ಯಮಾನವನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ.
ವಿಜ್ಞಾನ ತಂತ್ರಜ್ಞಾನದ ಯಾವುದೇ ಕುತೂಹಲಗಳಿದ್ದರೂ ಅವುಗಳನ್ನು ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಮಾಡಿ, ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ತೋರಿಸಲಾಗುತ್ತದೆ ಎಂದು ವಿಜ್ಞಾನ ಕೇಂದ್ರದ ಕ್ಯುರೇಟರ್ ಜಿ.ವಿ ಶಿವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.