ಬಳ್ಳಾರಿ: ನಿಮಗೆ ಅಭ್ಯರ್ಥಿ ಸಿಗ್ತಿಲ್ಲ. ನಮಗೇನ್ ಕೇಳ್ತಿರಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು
ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿಂದು ನಡೆದ ಲೋಕಸಭಾ ಚುನಾವಣಾ ನಿಮಿತ್ತ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಅಭ್ಯರ್ಥಿ ಕೊರತೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವ್ಯಂಗ್ಯ ವಾಡಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಿಮಗೆ ಅಭ್ಯರ್ಥಿ ಸಿಗಲಿಲ್ಲ. ಆ ಕಾರಣಕ್ಕಾಗಿಯೇ ಎಲ್ಲೋ ಬೆಂಗಳೂರಿನಿಂದ ಕರೆದುಕೊಂಡು ಬಂದು ಕಳೆದ ಉಪಚುನಾವಣೆ ಹಾಗೂ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೀರಿ ಎಂದರು.
ನಾವ್ ಎಲ್ಲಿಂದಲೋ ಕರೆದುಕೊಂಡು ಬರುತ್ತೀವಿ. ಅದನ್ನ ನಮಗೇನ್ ಹೇಳ್ತೀರಿ ಎಂದು ಕುಟುಕಿದರು.ಒಂದೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸದ ನಿಮ್ಮ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಇಲ್ಲಿಗೆ ತಂದು ನಿಲ್ಲಿಸಿದ್ರಿ. ನಿಮ್ಮಲ್ಲಿಯೇ ಅಭ್ಯರ್ಥಿ ಕೊರತೆಯಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಮೂರು ಕ್ಷೇತ್ರ ಹಾಗೂ ಕಾರವಾರ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಒಲ್ಲೆ ಎನ್ನುತ್ತಿದ್ದಾರೆ. ಬಹುತೇಕ ಕಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಇದು ಕಾಂಗ್ರೆಸ್ ಪರಿಸ್ಥಿತಿ ಎಂದರು.
ಗ್ರಾಜ್ಯುಯೇಟ್ ಆಗಬೇಕಿಲ್ಲ:
ಪಾರ್ಲಿಮೆಂಟ್ಗೆ ಆಯ್ಕೆಯಾಗಲು ಅಭ್ಯರ್ಥಿ ಗ್ರಾಜ್ಯುಯೇಟ್ ಆಗಿರಬೇಕು ಎಂದೇನಿಲ್ಲ. ಶ್ರೀಸಾಮಾನ್ಯರ ಕಷ್ಟಗಳು ಹಾಗೂ ಅವರೊಂದಿಗೆ ಬೆರೆಯುವಂತಹ ಮನಸ್ಸು ಹಾಗೂ ರಾಜಕೀಯ ಚಾಣಾಕ್ಷತನ ಇರಬೇಕು. ಇವತ್ತು ದೇಶದಲ್ಲಿ ಎಷ್ಟೋ ಮಂದಿ ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಅನಕ್ಷರಸ್ಥರೂ ಕೂಡ ಉತ್ತಮ ರಾಜಕಾರಣಿಗಳಾಗಿದ್ದಾರೆ. ತಮಿಳುನಾಡಿನಲ್ಲಿ ಕಾಮರಾಜ ಎಂಬುವರು ಅನಕ್ಷರಸ್ಥರು. ಅವರೂ ಕೂಡ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಅವರೊಬ್ಬ ಕಾಂಗ್ರೆಸ್ಸಿಗರು ಆಗಿದ್ದರು ಎಂದು ಸಚಿವ ಡಿ.ಕೆ.ಶಿವಕುಮಾರಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರು, ಒಂದಿಷ್ಟು ಆಂಗ್ಲ ಭಾಷೆಯಲಿ ಠುಸ್, ಬುಸ್ ಅಂತಾ ಮಾತನಾಡಿದ್ರೆ ಸಾಲದು. ಶ್ರೀಸಾಮಾನ್ಯರ ಕಷ್ಟ, ಸುಖಗಳ ಕುರಿತು ಅರಿಯಬೇಕು. ಆಗ ಮಾತ್ರ ಉತ್ತಮ ರಾಜಕಾರಣಿಯಾಗಲಿದ್ದಾರೆ ಎಂದರು. ಹೀಗಾಗಿ, ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಮಾದರಿ ಲೋಕಸಭಾ ಕ್ಷೇತ್ರದತ್ತ ಕೊಂಡೊಯ್ಯುಲಿದ್ದಾರೆಂಬ ಅಚಲವಾದ ವಿಶ್ವಾಸ ನನಗಿದೆ ಎಂದರು.