ಬೆಂಗಳೂರು: ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್- ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸುವ ವಿಚಾರವಾಗಿ ವಿಧಾನಪರಿಷತ್ನಲ್ಲಿ ಗಂಭೀರ ಚರ್ಚೆ ನಡೆಯಿತು.
ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮಂಡಿಸಿರುವ ನಿಯಮ 72ರ ಅಡಿ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಕೋವಿಡ್ ಹಿನ್ನೆಲೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಆದಷ್ಟು ಬೇಗ ಚುನಾವಣೆ ಮಾಡುವುದಾಗಿ ಭರವಸೆ ನೀಡಿದರು.
ಇದಕ್ಕೆ ಪ್ರತಿಪಕ್ಷ ನಾಯಕರಿಂದ ಬೇಸರ ವ್ಯಕ್ತವಾಯಿತು. ಕಲಬುರಗಿ ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಎದುರಾಗದ ಸಮಸ್ಯೆ ಬಳ್ಳಾರಿ ವಿಚಾರದಲ್ಲಿ ಮಾತ್ರ ಏಕೆ ಎದುರಾಗಿದೆ. ವಿಧಾನಮಂಡಲ ಅಧಿವೇಶನ ನಡೆಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಆಗದ ಸಮಸ್ಯೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ವಿಚಾರದಲ್ಲಿ ಯಾಕೆ ಎದುರಾಗಿದೆ. ಡಿಸೆಂಬರ್ವರೆಗೂ ಚುನಾವಣೆಯನ್ನು ಮುಂದೂಡುವುದು ಸರಿಯಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಬಲ ಹೆಚ್ಚಿರುವ ಹಿನ್ನೆಲೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಸಿಗುವುದಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದೇ ರೀತಿ ಇತ್ತೀಚೆಗೆ ನಡೆದ ಮೂರು ಮಹಾನಗರಪಾಲಿಕೆ ಮೇಯರ್-ಉಪಮೇಯರ್ ಆಯ್ಕೆಯಲ್ಲೂ ಅಳವಡಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರ ನೀಡಲು ತಡಕಾಡಿದ ಸಚಿವ ಬೈರತಿ ಬಸವರಾಜು ಅವರನ್ನು ಪ್ರತಿಪಕ್ಷ ಸದಸ್ಯರು ಮತ್ತಷ್ಟು ಒತ್ತಡ ಹೇರುವ ಮೂಲಕ ಆದಷ್ಟು ಶೀಘ್ರ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.
ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದ ಸಚಿವ ಬೈರತಿ ಬಸವರಾಜು ಈ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಈ ವಾರಾಂತ್ಯದಲ್ಲಿ ಅಲ್ಲಿನ ಅಧಿಕಾರಿಗಳ ಜೊತೆ ಸಮಾಲೋಚಿಸಿ ಆದಷ್ಟು ಶೀಘ್ರವಾಗಿ ಚುನಾವಣೆ ನಡೆಸುವಂತೆ ಕ್ರಮಕೈಗೊಳ್ಳಲು ತಿಳಿಸುತ್ತೇನೆ. ಇದರ ಪ್ರಗತಿಯ ಕುರಿತಾಗಿ ಕೆಸಿ ಕೊಂಡಯ್ಯ ಹಾಗೂ ಪ್ರತಿಪಕ್ಷ ನಾಯಕ ಹೆಸರು ಪಾಟೀಲ್ ಹಾಗೂ ಇತರೆ ಸದಸ್ಯರ ಜೊತೆ ಪ್ರತ್ಯೇಕ ಸಭೆ ನಡೆಸಿ ಸಂಗ್ರಹಿಸುತ್ತೇನೆ ಎಂದರು.