ವಿಜಯನಗರ: ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಕೊಡುತ್ತೇವೆ. ಸಮೃದ್ಧ ಕರ್ನಾಟಕ ಕಟ್ಟುವ ಕೆಲಸ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎಲ್ಲರೂ ಸೇರಿ ಕರ್ನಾಟಕ ಸಂಭ್ರಮದ ಪ್ರಯುಕ್ತ ಜ್ಯೋತಿ ರಥ ಬೆಳಗಿಸಿದ್ದೇವೆ. ಈ ರಥವು ರಾಜ್ಯಾದ್ಯಂತ ಸುತ್ತಿ ಕನ್ನಡತನವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತದೆ. 1956ರ ನ.1ರಂದು ಏಕೀಕರಣ ಆಗಿತ್ತು. ಸ್ವಾತಂತ್ರ್ಯ ಬಂದ ಬಳಿಕವೂ ಕನ್ನಡ ಮಾತನಾಡುವ ಜನರನ್ನು ಒಗ್ಗೂಡಿಸಲಾಯಿತು. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹೋರಾಟ, ತ್ಯಾಗ, ಬಲಿದಾನ ನಡೆದಿವೆ. ಅವರೆಲ್ಲರನ್ನೂ ನಾವು ಸ್ಮರಿಸಬೇಕಿದೆ. ನಾವು ಈಗ ನೋಡುತ್ತಿರುವ ರಾಜ್ಯ ಏಕೀಕರಣದ ಮುನ್ನ ಹೀಗೆ ಇರಲಿಲ್ಲ ಎಂದರು.
ಕಳೆದ ಸರ್ಕಾರವೇ ಕರ್ನಾಟಕ ಸಂಭ್ರಮ ಮಾಡಬೇಕಿತ್ತು. ಅವರು ಮಾಡಲಿಲ್ಲ. ನಾನು ಸಿಎಂ ಆದ ಬಳಿಕ 50 ವರ್ಷದ ಸಂಭ್ರಮದ ಕುರಿತು ಬಜೆಟ್ ಭಾಷಣದಲ್ಲಿ ಅನುದಾನ ಘೋಷಣೆ ಮಾಡಿದೆ. ಘೋಷವಾಕ್ಯ ಕೂಡ ಮಾಡಿದ್ದೇವೆ, ಅದುವೇ 'ಹೆಸರಾಯಿತು ಕರ್ನಾಟಕ, ಉಸಿರಾಯಿತು ಕರ್ನಾಟಕ' ಎಂದು ಹೇಳಿದರು.
ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಜನರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತೇವೆ. ಕುವೆಂಪು 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು' ಎಂದಿದ್ದಾರೆ. ನಾವು ನೆಲ, ಜಲ, ಭಾಷೆಯನ್ನು ಪ್ರೀತಿಸಬೇಕಿದೆ. ಕನ್ನಡಕ್ಕೆ ವಿಜಯನಗರ ಅರಸರ ಕೊಡುಗೆ ಅಪಾರ. ಅದನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.
ಬಳ್ಳಾರಿ ತಮಿಳುನಾಡಿನಲ್ಲಿತ್ತು, ಬೀದರ್, ಕೊಪ್ಪಳ, ರಾಯಚೂರು, ಕಲುಬುರಗಿ ಆಂಧ್ರಪ್ರದೇಶದಲ್ಲಿತ್ತು. ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿತ್ತು. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಆರ್ಟಿಕಲ್ 371 ಜೆ ಜಾರಿಗೆ ಹೋರಾಟ ಮಾಡಲಾಯಿತು. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಸೇರಿದಂತೆ ಅನೇಕರು ಹೋರಾಟ ಮಾಡಿದ್ದರು ಎಂದು ಹಳೆ ದಿನಗಳನ್ನು ಮೆಲುಕು ಹಾಕಿದರು.
ಬಸವಣ್ಣನ ನಾಡು ಈ ನೆಲ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕು. ಖಾಲಿ ಇರೋ ಹುದ್ದೆಗಳನ್ನು ಭರ್ತಿ ಮಾಡೋ ಕೆಲಸ ಮಾಡುತ್ತೇವೆ. ಈ ಭಾಗದಲ್ಲಿ ವೈದ್ಯರು, ಶಿಕ್ಷಕರು, ಇಂಜನಿಯರ್‌ಗಳು ಹೆಚ್ಚಾಗಲಿ. ಬಳ್ಳಾರಿ ಭಾಗ ಸೇರಿದಂತೆ ಅನೇಕ ಭಾಗಗಳು ಅಭಿವೃದ್ಧಿಯಾಗಲಿ ಎಂದರು.
ಕಳೆದ ಸರ್ಕಾರ ಕೊಟ್ಟ ಬಹುತೇಕ ಘೋಷಣೆಗಳು ಜಾರಿ ಮಾಡಿದ್ದೇವೆ. ಈ ಬಾರಿಯೂ ಸಹ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. 68 ಭರವಸೆಗಳನ್ನು ಈಡೇರಿಸುತ್ತೇವೆ. 2 ಲಕ್ಷದ 40 ಸಾವಿರ ಮನೆಗಳ ವಿತರಣೆ ಮಾಡಬೇಕಿದೆ ಎಂದರು.
ಇದನ್ನೂ ಓದಿ: ಹಂಪಿಯಲ್ಲಿ ವೀರ ಮಕ್ಕಳ ಕುಣಿತಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸ್ಟೆಪ್ಸ್: ವಿಡಿಯೋ
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ವಿಲಿಯಂ ಷೇಕ್ಸ್ಪಿಯರ್ಗೂ ಮುನ್ನ 600 ವರ್ಷಗಳ ಹಿಂದೆ ಆದಿಕವಿ ಪಂಪ ಇದ್ದರು. ತಮಿಳುನಾಡಿನಲ್ಲಿ ತಮಿಳು, ಆಂಧ್ರಪ್ರದೇಶದಲ್ಲಿ ತೆಲುಗು, ಕೇರಳದಲ್ಲಿ ಮಲಯಾಳಿ ಭಾಷೆಯಲ್ಲಿಯೇ ಮಾತನಾಡಬೇಕು. ಆದ್ರೆ ಕರ್ನಾಟಕದಲ್ಲಿ ಎಲ್ಲಾ ಭಾಷೆ ಮಾತನಾಡುತ್ತೇವೆ, ಕನ್ನಡ ಬಿಡಬೇಡಿ, ಬೇರೆ ಭಾಷೆ ಕಲಿಯಿರಿ ಎಂದರು.