ಹೊಸಪೇಟೆ : ಗ್ರಾಮೀಣ ಭಾಗದ ರೈತರ ಜೀವನಾಡಿಗಳಾದ ತಾಲೂಕಿನ ಹಲವು ಕೆರೆಗಳು ನೀರಲ್ಲಿದೇ ಭಣಗುಡುತ್ತಿವೆ. ಅಂತರ್ಜಲ ಹಾಗೂ ಕೃಷಿಗೆ ಬಳಕೆಯಾಗುತ್ತಿದ್ದ ಕೆರೆಗಳೀಗ ಹೂಳು ತುಂಬಿ ಹಾಳಾಗಿವೆ. ತುಂಗಭದ್ರಾ ಜಲಾಶಯದಿಂದ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯರೂಪಕ್ಕೆ ಬರುತ್ತಿಲ್ಲ. ಸ್ಥಳೀಯವಾಗಿ ನೀರಿನ ಸಂಪನ್ಮೂಲ ದೊರೆಯಲಿದೆ ಎಂಬ ಉದ್ದೇಶದಿಂದ ನಿರ್ಮಾಣಗೊಂಡಿದ್ದ ಕೆರೆಗಳು ಈಗ ಅನುಪಯುಕ್ತ ಆಟಿಕೆ ಸ್ಥಳವಾಗಿವೆ.
ತಾಲೂಕಿನ ಇಂಗಳಿಗೆ ಕೆರೆ, ನಲ್ಲಾಪುರ ಕೆರೆ, ಬೈಲುವದ್ದಗೇರಿ ಕೆರೆ, ಪಿಕೆಹಳ್ಳಿಯ ಚಟ್ಟಿ ಕೆರೆ, ಜೋಗದ ಕೆರೆ ಹಾಗೂ ತುಂಗಭದ್ರಾ ಜಲಾಶಯದ ಬಳಿಯ ರಾಯರ ಕೆರೆಗಳನ್ನು ತುಂಬಿಸುವಂತ ಕಾರ್ಯವಾಗುತ್ತಿಲ್ಲ. ಇದರಿಂದ ನೂರಾರು ರೈತರು ನೀರಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂಗಳಿಗೆ ಗ್ರಾಮದ ಬಳಿಯ ತುಂಗಭದ್ರಾ ಜಲಾಶಯದ ಬಲದಂಡೆ ತಾಲೂಕಿನ ಗ್ರಾಮೀಣ ಭಾಗದ ರೈತರ ಜೀವನಾಡಿಗಳಾದ ಕೆರೆಗಳು ನೀರಲ್ಲಿದೇ ಭಣಗುಡುತ್ತಿವೆ.
ತಾಲೂಕಿನ ಇಂಗಳಿಗೆ ಗ್ರಾಮದ ಬಳಿ ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟ ಕಾಲುವೆ (ಆರ್ಬಿಹೆಚ್ಎಲ್ಸಿ) ಹಾದು ಹೋಗುತ್ತದೆ. ಆದರೆ, ಈ ಕೆರೆ ತುಂಬಿಸುವ ಪ್ರಯತ್ನ ನಡೆದಿಲ್ಲ. ಕೆರೆ ತುಂಬಿಸಿದ್ರೇ ಈ ಭಾಗದ ಜನ ಹಾಗೂ ರೈತರಿಗೆ ಅನುಕೂಲವಾಗುತ್ತಲಿತ್ತು. ಈ ಕುರಿತು ಯೋಜನೆ ರೂಪಗೊಳ್ಳಬೇಕಾಗಿದೆ. ಇನ್ನು, ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಬರುವ ರಾಯರ ಕೆರೆ ತುಂಬಿಸುವಂತ ಕಾರ್ಯ ಸಹ ಆಗುತ್ತಿಲ್ಲ.
ಜಲಾಶಯದ ಸದ್ಭಳಕೆಯಾಗುತ್ತಿಲ್ಲ : ಸ್ಥಳೀಯವಾಗಿ ತುಂಗಭದ್ರಾ ಜಲಾಶಯವನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನವಾಗುತ್ತಿಲ್ಲ. ಪ್ರತಿವರ್ಷ ಜಲಾಶಯ ತುಂಬಿದ ಬಳಿಕ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ನದಿ ಮೂಲಕ ಹೋಗುತ್ತದೆ. ಆ ನೀರನ್ನು ಸದ್ಬಳಕೆ ಮಾಡಿಕೊಂಡು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾದ್ರೇ ರೈತರ ಜೀವನ ಹಸನಾಗಲಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇದನ್ನೂ ಸಹ ಮಾಡುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ.
ಕರೆಗಳ ಒತ್ತುವರಿ : ತಾಲೂಕಿನ ಹಲವು ಕೆರೆಗಳು ಒತ್ತುವರಿಗೊಂಡಿವೆ ಎಂಬ ಆರೋಪ ಜೋರಾಗಿದೆ. ಸರ್ವೆ ಕಾರ್ಯ ನಡೆಸಿ ಅವುಗಳನ್ನು ಉಳಿಸುವ ರಕ್ಷಿಸ ಬೇಕಾಗಿದೆ.
ಕುಸಿದ ನೀರಿನ ಸಾಮರ್ಥ್ಯ: ಐತಿಹಾಸಿಕ ಕಮಲಾಪುರ ಕೆರೆ ಹೂಳು ಹಾಗೂ ಕಸ ಕಡ್ಡಿಯಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಈ ಕೆರೆ ಕಮಲಾಪುರ ಹಾಗೂ ಕಡ್ಡಿರಾಂಪುರ ಗ್ರಾಮದ ಕೃಷಿಕರಿಗೆ ಜೀವನಾಡಿ. ಅಲ್ಲದೇ, ಮೀನುಗಾರಿಕೆ ಆಸರೆ. ಸುಮಾರು 600 ಎಕೆರೆ ವಿಸ್ತೀರ್ಣದ ಈ ಕೆರೆ 105 ಮಿಲಿಯನ್ ಘನ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಹೂಳು ತೆಗೆದ್ರೆ ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚುತ್ತೆ ಅನ್ನೋದು ಸ್ಥಳೀಯರ ಮಾತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್ ಬಣ) ತಾಲೂಕು ಘಟಕ ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ತಾಲೂಕಿನ ಕೆರೆಗಳನ್ನು ತುಂಬಿಸುವ ಕಾರ್ಯವಾಗಬೇಕಾಗಿದೆ. ಹೊಸಪೇಟೆ ಹಾಗೂ ಕಂಪ್ಲಿ ಸೇರಿ 22 ಕೆರೆಗಳು ಬರುತ್ತವೆ. ಅವುಗಳಲ್ಲಿ ಬಹುತೇಕ ನಿರ್ಲಕ್ಷ್ಯಕ್ಕೊಳಗಾಗಿವೆ. ಇದರಿಂದ ರೈತರಿಗೆ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ. ಕೆರೆಗಳನ್ನು ತುಂಬಿಸುವಂತೆ ಜಿಲ್ಲಾ ಸಚಿವರಿಗೆ ಹಾಗೂ ಜಿಲ್ಲಾಡಳಿತ ಮನವಿ ಸಲ್ಲಿಸಿದ್ರೂ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಟಿವಿ ಭಾರತ್ ದೂರವಾಣಿ ಮೂಲಕ ಜಿಲ್ಲಾ ಪಂಚಾಯತ್ ಸಿಇಒ ನಂದಿನಿ ಅವರನ್ನು ಸಂಪರ್ಕಿಸಿದಾಗ ಕರೆಯನ್ನು ಸ್ವೀಕರಿಸಲಿಲ್ಲ.