ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ (ವಿಮ್ಸ್) ವೈದ್ಯ ಡಾ. ವಿಜಯ ಶಂಕರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಶಾಸ್ತ್ರೀನಗರದ ನಿವಾಸಿಯಾದ ಡಾ. ವಿಜಯ ಶಂಕರ್ (49) ವಿಮ್ಸ್ ಆಸ್ಪತ್ರೆಯ ಚರ್ಮ ರೋಗ ತಜ್ಞರಾಗಿದ್ದರು. ಸೋಂಕು ತಗುಲಿದ ಕಾರಣ ನಗರದ ಆರಾಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅತೀವ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಡಾ. ವಿಜಯ ಶಂಕರ್ಗೆ ಆರೋಗ್ಯದಲ್ಲಿ ಅತೀವ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ನಾರಾಯಣ ಹೃದಯಾಲಯದ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ವೈದ್ಯ ಸಾವನ್ನಪ್ಪಿದ್ದಾರೆ.
ಡಾ. ವಿಜಯ ಶಂಕರ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ವಿಜಯ ಶಂಕರ್ ಸೋಂಕು ತಗುಲಿದ ಮೇಲೆ ಕೆಲ ದಿನಗಳ ಕಾಲ ಹೋಮ್ ಐಸೋಲೇಷನ್ನಲ್ಲಿದ್ದರು. ನಂತರ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತೆಂದು ಕುಟುಂಬದ ಮೂಲಗಳು ತಿಳಿಸಿವೆ.