ಬಳ್ಳಾರಿ : ಬೆಳೆದು ನಿಂತಿರುವ ಭತ್ತದ ಬೆಳೆಯ ಸಂಪೂರ್ಣ ಫಸಲು ದೊರೆಯುವಂತಾಗಲು ಏ.10ರವರೆಗೆ ನೀರು ಬಿಡಲು ಕ್ರಮ ತೆಗೆದುಕೊಳ್ಳುವಂತೆ ತುಂಗಭದ್ರಾ ರೈತ ಸಂಘ ಮನವಿ ಮಾಡಿದೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಹಾಗೂ ತುಂಗಭದ್ರಾ ಮಂಡಳಿ ಅಧಿಕಾರಿಗಳಿಗೆ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮನವಿ ಸಲ್ಲಿಸಿದರು.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ. 31ರವರೆಗೆ ಕಾಲುವೆಗೆ ನೀರು ಬಿಡುವುದಾಗಿ ಹೇಳಿತ್ತು. ಆದರೆ, ವಾತಾವರಣದ ವೈಪರೀತ್ಯದಿಂದಾಗಿ ಬೆಳೆ ಬೆಳೆಯಲು ತಡವಾಗಿದೆ.
ರೈತ ಕಷ್ಟಪಟ್ಟು ಸಾವಿರಾರು ರೂ. ವೆಚ್ಚ ಮಾಡಿ ಬೆಳೆದಿರುವ ಭತ್ತದ ಬೆಳೆಗೆ ಮಾ.31ಕ್ಕೆ ನೀರು ನಿಲ್ಲಿಸಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಇದರಿಂದ ಕೋಟ್ಯಂತರ ರೂ. ನಷ್ಟ ಆಗಲಿದೆ. ಹಾಗಾಗಿ, ಏ.10ರವರೆಗೆ ನೀರು ಬಿಡಲು ಕ್ರಮ ತೆಗೆದುಕೊಳ್ಳಬೇಕೆಂದು ಪುರುಷೋತ್ತಮಗೌಡ ಮನವಿ ಮಾಡಿದ್ದಾರೆ.