ಹೊಸಪೇಟೆ: ತಾಲೂಕಿನ ತುಂಗಭದ್ರಾ ಜಲಾಶಯದ ನೀರಿನ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟ ಪರಿಣಾಮ ತುಂಗಭದ್ರೆ ತನ್ನ ರೌದ್ರ ನರ್ತನ ತೋರಿಸುತ್ತಿದ್ದಾಳೆ.
ಐತಿಹಾಸಿಕ ನಗರಿ ಎಂದು ಕರೆಯುವ ಹಂಪಿಯ ಹಲವು ಮಂದಿರಗಳು ಹಾಗೂ ಮಂಟಪಗಳಿಗೆ ತುಂಗಭದ್ರೆ ಆವರಿಸಿಕೊಂಡಿದ್ದಾಳೆ. ಪುರಂದರ ಮಂಟಪ, ಕರ್ಮ ಮಂಟಪಗಳು ಹಾಗೂ ಕೋದಂಡರಾಮ ಮಂದಿರ ಜಲಾವೃತವಾಗಿವೆ.
ನೀರಿನ ರಭಸಕ್ಕೆ ಹಂಪಿಯಿಂದ ವಿರುಪಾಪುರ ಗಡ್ಡೆ ನಡುವಿನ ಸಂಪರ್ಕ ಕಡಿತಗೊಂಡಿದೆ. ತುಂಗಭದ್ರೆಯ ಈ ರೌದ್ರ ನರ್ತನಕ್ಕೆ ನದಿ ಪಾತ್ರದ ಜನರು ಮತ್ತು ಪ್ರವಾಸಿಗರು ಭಯಭೀತರಾಗಿದ್ದಾರೆ.