ಹೊಸಪೇಟೆ/ಬಳ್ಳಾರಿ: ಅಮೆರಿಕದಲ್ಲಿ ತಲೆ ದೋರಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಹೊಸ ಆರ್ಥಿಕ ನೀತಿ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಡೊನಾಲ್ಡ್ ಟ್ರಂಪ್ ಆಗಮಿಸುತ್ತಿದ್ದಾರೆ. ಅವರು ದೇಶಕ್ಕೆ ಬರುವುದು ಅವಶ್ಯಕತೆಯಿಲ್ಲ ಎಂದು ವಿವಿಧ ಸಂಘನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಸಿಪಿಐಎಂ ಪಕ್ಷದ ಕಾರ್ಯಕರ್ತರು ಗೋ ಬ್ಯಾಕ್ ಟ್ರಂಪ್ ಎಂದು ಘೋಷಣೆ ಕೂಗಿದರು. ಸಿಪಿಐಎಂ ಪಕ್ಷದ ತಾಲೂಕು ಅಧ್ಯಕ್ಷ ಭಾಸ್ಕರ್ ರೆಡ್ಡಿ ಮಾತನಾಡಿ, ಅಮೆರಿಕದಲ್ಲಿ ರೈತರು ಬೆಳೆದ ಬೆಳೆ, ಹೈನುಗಾರಿಕೆಯನ್ನು ಭಾರತದ ಮಾರುಕಟ್ಟೆಗೆ ರಪ್ತು ಮಾಡಿ ಭಾರತದ ರೈತರನ್ನು ಬಲಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಭಾರತದ ಆಟೋ ಮೊಬೈಲ್ಸ್ ಉದ್ಯಮ ಕ್ಷೇತ್ರದಲ್ಲಿ ಅಪಾರವಾದ ಬಿಕ್ಕಟ್ಟು ಎದುರಿಸುತ್ತಿದೆ. ಈ ವಲಯದಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಸಮಯದಲ್ಲಿ ಅಮೆರಿಕದ ಕಾರು, ಜೀಪು ಹಾಗೂ ಟ್ರ್ಯಾಕ್ಟರ್ನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದು ಸರಿಯಲ್ಲ. ಇದು ಹೊಸ ಬಿಕ್ಕಟ್ಟು ಸೃಷ್ಠಿಗೆ ಕಾರಣವಾಗಿದೆ ಎಂದರು.
ಇನ್ನು ಬಳ್ಳಾರಿಯ ಡಾ.ರಾಜ್ ರಸ್ತೆಯಲ್ಲಿರೊ ನಾರಾಯಣರಾವ್ ಪಾರ್ಕ್ನಿಂದ ಕೋಳಿ ಸಾಕಣಿಕೆದಾರರ ಒಕ್ಕೂಟ, ರೈತ- ಕೃಷಿ , ಕೂಲಿ ಕಾರ್ಮಿಕರ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ, ಆದಿವಾಸಿ ಬುಡಕಟ್ಟು ವೇದಿಕೆ, ತುಂಗಭದ್ರ ರೈತ ಸಂಘ, ರಾಜ್ಯ ರೈತ ಸಂಘಟನೆ (ಪುಟ್ಟಣ್ಣಯ್ಯ ಬಣ) ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಹಯೋಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಮೆರಿಕದೊಂದಿಗೆ ಭಾರತ ಹೈನುಗಾರಿಕೆ ಹಾಗೂ ಕೋಳಿ ಸಾಕಣೆ ಒಪ್ಪಂದ ಮಾಡಿಕೊಳ್ಳಲಿದೆ. ದೇಶದ ಹೈನುಗಾರಿಕೆ ಮತ್ತು ಕೋಳಿ ಸಾಕಣಿಕೆದಾರರ ಉದ್ಯಮಕ್ಕೆ ಮರಣ ಶಾಸನವಾಗಲಿರುವ ಒಪ್ಪಂದವನ್ನು ಕೈಬಿಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿದರು.
ರಾಯಚೂರು, ಮೈಸೂರಿನಲ್ಲೂ ಪ್ರತಿಭಟನೆ: ಟ್ರಂಪ್ ಭೇಟಿ ವಿರೋಧಿಸಿ ಕೆಪಿಆರ್ಎಸ್ ಸಂಘಟನೆಯಿಂದ ರಾಯಚೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಮುಂಭಾಗದಲ್ಲಿ ಟ್ರಂಪ್ ಭಾವಚಿತ್ರವನ್ನ ದಹಿಸಿ ಆಕ್ರೊಶ ವ್ಯಕ್ತಪಡಿಸಿದರು. ಅಮೆರಿಕದೊಂದಿಗೆ ಭಾರತ ಹೈನುಗಾರಿಕೆ ಹಾಗೂ ಕೋಳಿ ಸಾಕಣಿಕಾ ಒಪ್ಪಂದ ಮಾಡಿಕೊಳ್ಳಲಿದೆ. ಆದ್ರೆ ಈ ಒಪ್ಪಂದಿದ್ದ ಭಾರತದ ದೇಶದ ಹೈನುಗಾರಿಕೆ ಹಾಗೂ ಕೋಳಿ ಸಾಕಣೆ ಮಾಡುವವರು ದಿವಾಳಿಯಾಗಲಿದ್ದಾರೆ. ಆದ್ದರಿಂದ ಅಮೆರಿಕದೊಂದಿಗೆ ಕೋಳಿ ಸಾಕಣೆ, ಹೈನುಗಾರಿಕೆ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿದ್ರು.
ಇನ್ನು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಿ, ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಿನ್ನೆಲೆಯಲ್ಲಿ ಟ್ರಂಪ್,ನಮ್ಮ ದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಒಪ್ಪಂದ ಜಾರಿಯಾದರೆ ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮಕ್ಕೆ ಬಹಳಷ್ಟು ತೊಂದರೆಯಾಗಲಿದೆ ಎಂದು ಕಿಡಿ ಕಾರಿದರು.