ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ಮೂವರಿಗೆ ಸಿಡಿಲು ಬಡಿದ ಪರಿಣಾಮ ಮೃತಪಟ್ಟಿರುವ ಘಟನೆ ನಡೆದಿದೆ. ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದ ನಿವಾಸಿಗಳಾದ ಶೇಖರಗೌಡ (32) ಹಾಗೂ ಬಸವನಗೌಡ (38) ಮೃತರು ಎಂಬುದು ತಿಳಿದಿದೆ. ಇನ್ನೊಬ್ಬನ ಹೆಸರು ತಿಳಿದು ಬಂದಿಲ್ಲ.
ಮೃತರು ಸಂಬಂಧಿಕರ ಮದುವೆ ಕಾರ್ಯಕ್ರಮದ ನಿಮಿತ್ತ ಸೀಮಾಂಧ್ರದ ಹೊಳಗುಂದ ಮಂಡಲ ವ್ಯಾಪ್ತಿಯ ವಿರೂಪಾಪುರ ಗ್ರಾಮದ ಬಳಿ ಇರುವ ಬೊಗಟೇಶ್ವರ ದೇವಸ್ಥಾನಕ್ಕೆ ಗುರುವಾರ ಬೆಳಗ್ಗೆ ಗ್ರಾಮದಿಂದ ತೆರಳಿದ್ದರು. ಮದುವೆಯ ಕಾರ್ಯಕ್ರಮ ಮುಗಿಸಿಕೊಂಡ ನಂತರ ಮರದ ಬಳಿ ನಿಂತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈತನ ಜೊತೆಗಿದ್ದ ಬೇರೆ ಗ್ರಾಮಗಳ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಡಿಲು ಬಡಿದು ಮೃತಪಟ್ಟ ಶೇಖರಗೌಡ ಅವರಿಗೆ ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಗ್ರಾಮದಲ್ಲಿ ಘಟನೆಯ ವಿಷಯ ತಿಳಿಯುತ್ತಿದ್ದಂತೆ ನೀರವ ಮೌನ ಆವರಿಸಿದೆ. ಮೃತ ದೇಹಗಳನ್ನು ಗ್ರಾಮಕ್ಕೆ ತರಲಾಗುತ್ತಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ತಿಳಿದಿದೆ.
ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ- ಓರ್ವ ಸಾವು, ಮೂವರಿಗೆ ಗಾಯ: ಬೆಳಗಾವಿಯ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ ಗ್ರಾಮದ ಹತ್ತಿರ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದರಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಯಲ್ಲಪ್ಪ ವಣ್ಣೂರ್ (25) ಅಪಘಾತದಲ್ಲಿ ಸಾವನ್ನಪ್ಪಿದವರು.
ಒಂದೇ ಬೈಕ್ನಲ್ಲಿ ಚಲಿಸುತ್ತಿದ್ದ ಪಲ್ಲವಿ ವಣ್ಣೂರ್ (16), ಐಶ್ವರ್ಯಾ ವಣ್ಣೂರ್ (16), ಭೀಮಪ್ಪ ವಣ್ಣೂರ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಸಿಯಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಕಡತನಬಾಗೇವಾಡಿ ಗ್ರಾಮದಿಂದ ಆಳ್ನಾವರ ಸಮೀಪದ ಗೋಪೇನಟ್ಟಿಗೆ ಬರುತ್ತಿದ್ದ ಬೈಕ್ ನಡುವೆ ಗೊಲ್ಲಿಹಳ್ಳಿ ಹತ್ತಿರ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿದ್ದರಿಂದ ಬಸ್ಗೆ ಡಿಕ್ಕಿ ಹೊಡೆದಿದೆ.
ಬೈಕ್ನಲ್ಲಿ ಚಲಿಸುತ್ತಿದ್ದವರು ಗಂಭೀರವಾಗಿ ಗಾಯಗೊಂಡು ಒಂದು ಗಂಟೆ ನರಳಾಡಿದರೂ ಕೂಡ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರಲಿಲ್ಲ. ಬಳಿಕ ನೋವಿನಿಂದ ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಯಲಪ್ಪ ವಣ್ಣೂರ್ ಅವರನ್ನು ಕಾರ್ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಒಂದು ತಾಸು ತಡವಾಗಿ ಘಟನಾ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದ ನಂತರ, ಉಳಿದ ಮೂವರು ಗಾಯಳುಗಳನ್ನು ಬೆಳಗಾವಿ ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ತೀವ್ರವಾಗಿ ಗಾಯಗೊಂಡಿದ್ದ ಯಲ್ಲಪ್ಪ ವಣ್ಣೂರ್ ಮೃತಪಟ್ಟಿದ್ದಾರೆ. ಮೊನ್ನೆ ಮೃತ ಯಲ್ಲಪ್ಪ ಸಹೋದರನ ಮದುವೆ ಕಾರ್ಯಕ್ರಮ ಮುಗಿದಿತ್ತು. ಇವತ್ತು ಅಳ್ನಾವರ ಬಳಿಯ ಗೋಪೇನಟ್ಟಿಗೆ ಒಂದೇ ಬೈಕಿನ ಮೇಲೆ ನಾಲ್ವರು ತೆರಳುತ್ತಿದ್ದರು.
"ಯಲ್ಲಪ್ಪ ಬೈಕ್ ಚಲಾಯಿಸುತ್ತಿದ್ದ. ಮದುವೆಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಗೋಪೇನಟ್ಟಿಗೆ ಕಳಿಸಲು ಯಲ್ಲಪ್ಪ ಮತ್ತು ಭೀಮಪ್ಪ ತೆರಳುತ್ತಿದ್ದರು. ಇವರೆಲ್ಲ ನಮ್ಮ ಸಂಬಂಧಿಕರೇ ಆಗಿದ್ದಾರೆ, ನಮ್ಮ ಊರಿನಿಂದ 10 ಕಿಮೀ ಅಂತರದಲ್ಲಿ ಈ ಅಪಘಾತ ನಡೆದಿದೆ'' ಎಂದು ಮೃತ ಯುವಕನ ಸಂಬಂಧಿಕ ಬಸಪ್ಪ ಗಂಗಪ್ಪ ವಣ್ಣೂರ ತಿಳಿಸಿದರು. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 'ತೇಲುವ ಚಿನ್ನ'ವೆಂಬ ಅಂಬರ್ ಗ್ರಿಸ್ ತಂದು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ..!