ಬಳ್ಳಾರಿ: ಗಣಿನಗರಿ ಬಳ್ಳಾರಿಯ ಬೆಂಗಳೂರು ಮಾರ್ಗದಲ್ಲಿರುವ ಕೈಗಾರಿಕಾ ಘಟಕಗಳಲ್ಲಿ ಆಗಾಗ ಅಗ್ನಿ ಅವಘಡ ಸಂಭವಿಸಿದಾಗ, ಆ ಅವಘಡಗಳನ್ನು ತುರ್ತಾಗಿ ನಿಯಂತ್ರಿಸೋದಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕೈಗಾರಿಕಾ ಘಟಕಗಳಲ್ಲಿ ಅಗ್ನಿ ನಂದಿಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ಹೌದು, ಬಳ್ಳಾರಿ ನಗರ ಹೊರವಲಯದ ಕೈಗಾರಿಕಾ ಘಟಕಗಳಲ್ಲಿ ಅಗ್ನಿ ಅವಘಡಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಅದನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಪಡಬಾರದ ಕಷ್ಟಗಳನ್ನು ಪಡುತ್ತಿರೋದು ಈಗ ಸಾಬೀತಾಗಿದೆ.
ಬಳ್ಳಾರಿ ನಗರದ ಕುಮಾರಸ್ವಾಮಿ ದೇಗುಲದ ರಸ್ತೆಯಲ್ಲಿರುವ ಜಿಲ್ಲಾ ಅಗ್ನಿ ಶಾಮಕದಳದ ಪ್ರಾದೇಶಿಕ ಕಚೇರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಅಂದಾಜು ಐದು ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ಬೆಂಗಳೂರು ರಸ್ತೆಯಲ್ಲಿನ ಕೈಗಾರಿಕಾ ಘಟಕಗಳಿಗೆ ತೆರಳಬೇಕಾದ್ರೆ ಕೊಂಚ ಸಮಯ ಬೇಕೇ ಬೇಕು. ಇಲ್ಲಿಂದ - ಅಲ್ಲಿಗೆ ಹೋಗುವುದರಲ್ಲಿ ಅಗ್ನಿ ಮತ್ತಷ್ಟು ಹರಡಿರುತ್ತದೆ. ಅಲ್ಲಿನ ಅಜಾಗರೂಕತೆಯಿಂದಲೂ ಕೂಡ ಮತ್ತಷ್ಟು ಅಗ್ನಿ ಹರಡಿ ಸಾಕಷ್ಟು ಆಸ್ತಿ- ಪಾಸ್ತಿ ಹಾನಿ ಉಂಟಾಗಿರುವುದು ಕಂಡುಬಂದಿದೆ.
ಕಾಟನ್ ಕೈಗಾರಿಕಾ ಘಟಕಗಳಲ್ಲೇ ಅಗ್ನಿ ಅವಘಡ ಹೆಚ್ಚು:
ಇತ್ತೀಚಿನ ದಿನಮಾನಗಳಲ್ಲಿ ಕಾಟನ್ ಕೈಗಾರಿಕಾ ಘಟಕಗಳಲ್ಲೇ ಇಂತಹ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. ಅಲ್ಲಿ ಅಗ್ನಿ ಅವಘಡಗಳ ನಿಯಂತ್ರಣದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಇಂತಹ ಅವಘಡಕ್ಕೆ ಕಾರಣ. ಅಗ್ನಿ ಅವಘಡ ನಿಯಂತ್ರಣಕ್ಕೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಈ ಅಗ್ನಿ ಶಾಮಕದಳ ಇಲಾಖೆಯಲ್ಲಿ ನಿರ್ದಿಷ್ಟ ಮಾರ್ಗಸೂಚಿ ಹಾಗೂ ಆದೇಶದ ಪ್ರತಿಯೂ ಕೂಡ ಇಲ್ಲ. ಹೀಗಾಗಿ, ಅಗ್ನಿಶಾಮಕ ದಳದ ಅಧಿಕಾರಿವರ್ಗ ಮಾತ್ರ ಕಠಿಣ ಕ್ರಮ ಕೈಗೊಳ್ಳಲಾರದ ಪರಿಸ್ಥಿತಿ ಎದುರಾಗಿದೆ.
ಕೈಗಾರಿಕಾ ಘಟಕಗಳಲ್ಲಿಲ್ಲ ಸೂಕ್ತ ಮುಂಜಾಗ್ರತಾ ಕ್ರಮಗಳು:
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಕೆ. ತಿಮ್ಮಾರೆಡ್ಡಿ, 2013- 14 ನೇಯ ಇಸವಿಯಲ್ಲಿ ಎರಡು ಕೋಲ್ಡ್ ಸ್ಟೋರೇಜ್ಗಳಲ್ಲಿ ಗಂಭೀರ ಅಗ್ನಿ ಅವಘಡಗಳು ಸಂಭವಿಸಿದೆ. ಅವುಗಳಲ್ಲಿ ಅಂದಾಜು 30 ಕೋಟಿ ರೂ.ಗಳಷ್ಟು ಆಸ್ತಿ- ಪಾಸ್ತಿಗೆ ಹಾನಿಯುಂಟಾಗಿತ್ತು. ಅದರೊಳಗೆ ಅಗ್ನಿ ಅವಘಡ ನಿಯಂತ್ರಿಸುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರೋದರಿಂದಲೇ ಇಂತಹ ದೊಡ್ಡ ಅವಘಡಗಳು ಸಂಭವಿಸಲಿಕ್ಕೆ ಕಾರಣವಾಗಿದೆ. ಅದು ಬಿಟ್ಟರೇ ಈವರೆಗೂ ಈ ಜಿಲ್ಲೆಯೊಳಗೆ ಅಂತಹ ದೊಡ್ಡ ಅಗ್ನಿ ಅವಘಡಗಳು ಸಂಭವಿಸಿಲ್ಲ.
ಇದನ್ನೂ ಓದಿ: ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಕಾರು.. ವಿಡಿಯೋ
ಕೇವಲ ಕಾಟನ್ ಕೈಗಾರಿಕಾ ಘಟಕಗಳಲ್ಲಿ ಆಗಾಗ್ಗೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ, ನಾವು ಕೂಡ ಪ್ರತಿವರ್ಷ ತುರ್ತಾಗಿ ಸಂಭವಿಸುವ ಅಗ್ನಿ ಅವಘಡಗಳನ್ನು ನಿಯಂತ್ರಿಸಲಿಕ್ಕಾಗಿ ಮುಂಜಾಗ್ರತಾ ಕ್ರಮಗಳೊಂದಿಗೆ ಅಗ್ನಿ ಅವಘಡ ನಿಯಂತ್ರಣದ ಯಂತ್ರೋಪಕರಣಗಳನ್ನು ತಮ್ಮ ತಮ್ಮ ಕೈಗಾರಿಕಾ ಘಟಕಗಳಲ್ಲಿ ಅಳವಡಿಸಿಕೊಂಡು ಬೆಂಕಿ ನಂದಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೇವೆ. ಅದರಿಂದ ಸಾರ್ವಜನಿಕ ಆಸ್ತಿ- ಪಾಸ್ತಿಗೆ ಹಾನಿಯುಂಟಾಗುವುದನ್ನು ತಕ್ಷಣವೇ ತಡೆಯೋದಕ್ಕೆ ಸಹಕಾರಿಯಾಗಲಿದೆ ಎಂದ್ರು ತಿಮ್ಮಾರೆಡ್ಡಿ.