ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ವಡ್ಡನಹಳ್ಳಿ ತಾಂಡದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟು ನೇತ್ರಾಬಾಯಿ ಅವರ ನೆಮ್ಮದಿಯ ಜೀವನಕ್ಕೆ ರಾಷ್ಟ್ರೀಯ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಆಸರೆಯಾಗಿದೆ.
ವಡ್ಡನಹಳ್ಳಿ ತಾಂಡದ ನಿವಾಸಿಯಾದ ನೇತ್ರಾಬಾಯಿ ಅವರು ಬಡ ಕುಟುಂಬದವರಾಗಿದ್ದಾರೆ. ಕರಾಟೆ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುವಾಗಿದ್ದಾರೆ. 2019 ನೇ ಇಸವಿಯಲ್ಲಿ ಶ್ರೀಲಂಕಾ ದೇಶದ ಕೊಲಂಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತಂದಿದ್ದರು.
ನರೇಗಾ ಯೋಜನೆಯಡಿ ಉದ್ಯೋಗಾವಕಾಶ:
ನಿರುದ್ಯೋಗಿಯಾಗಿದ್ದ ಈ ಯುವತಿಗೆ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗಾವಕಾಶ ನೀಡಲಾಗಿದೆ. ಪ್ರತಿನಿತ್ಯ ನಾನಾ ತಾಂಡಾದ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ, ಕನಿಷ್ಠ ಕೂಲಿ ಅರಸಿ ಗುಳೆ ಹೋಗದಂತೆ ಜಾಗೃತಿ ಮೂಡಿಸಿ ಸ್ಥಳೀಯವಾಗಿಯೇ ಕಾರ್ಮಿಕರಿಗೆ ಕೂಲಿ ಕೆಲಸ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.
ಸೂಕ್ತ ಸೂರಿಲ್ಲ:
ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುವಾದ ನೇತ್ರಾಬಾಯಿಗೆ ವಾಸಕ್ಕೆ ಸರಿಯಾದ ಸೂರಿಲ್ಲ. ಮಳೆ ಬಂದರೆ ಸಾಕು ಚಿಕ್ಕ ತಗಡಿನ ಮನೆಯೆಲ್ಲಾ ಸೋರುತ್ತದೆ, ಗೋಡೆಗಳು ಬಿರುಕು ಬಿಟ್ಟಿವೆ. ಅಪಾಯದ ಅಡಿಯಲ್ಲಿ ಈ ಕುಟುಂಬ ವಾಸ ಮಾಡುತ್ತಿದ್ದು, ಬಡತನದಲ್ಲೇ ಇಬ್ಬರು ಸಹೋದರಿಯರು, ತಾಯಿಯನ್ನು ಸಾಕುವ ಹೊಣೆ ಹೊತ್ತಿದ್ದಾರೆ.
ಕರಾಟೆ ತರಗತಿ:
ನರೇಗಾ ಯೋಜನೆಯ ಜೊತೆಜೊತೆಗೆಯೇ ಹೂವಿನಹಡಗಲಿ ಪಟ್ಟಣದಲ್ಲಿ ಕರಾಟೆ ತರಗತಿ ನಡೆಸುತ್ತಿದ್ದರು. ಕೊರೊನಾ ಅಡ್ಡಿಯಾಗಿದ್ದರಿಂದ ಮಕ್ಕಳು ಕರಾಟೆ ತರಬೇತಿಗೆ ದಾಖಲಾಗದ ಕಾರಣ ಪೂರ್ಣ ನರೇಗಾ ಕೂಲಿ ಕೆಲಸದಲ್ಲೇ ತೊಡಗಿಸಿಕೊಂಡಿರೋದು ಹೆಮ್ಮೆಯ ಸಂಗತಿ.
ಗುಳೆ ಹೋಗುವುದರ ತಡೆಗೆ ಕ್ರಮ:
ಹೂವಿನಹಡಗಲಿ ತಾಲೂಕಿನ ನಾನಾ ತಾಂಡಗಳ ಕೂಲಿ ಕಾರ್ಮಿಕರು ಕಾಫಿ ನಾಡು ಹಾಗೂ ನಗರ ಪ್ರದೇಶಗಳಿಗೆ ಕೂಲಿ ಅರಸಿ ಗುಳೆ ಹೋಗೋದನ್ನು ತಪ್ಪಿಸಲು, ಸರ್ಕಾರ ತಾಂಡ ಅಭಿವೃದ್ಧಿ ನಿಗಮ ಮತ್ತು ನರೇಗಾ ಯೋಜನೆ ಯಡಿ, ತಾಂಡ ರೋಜ್ಗಾರ್ ಮಿತ್ರ ಜಾರಿಗೆ ತಂದಿದೆ. ಜನರಲ್ಲಿ ನರೇಗಾ ಜಾಗೃತಿ ಮೂಡಿಸಿ ಸ್ಥಳೀಯವಾಗಿಯೇ ಉದ್ಯೋಗ ಅವಕಾಶ ನೀಡುವ ಉದ್ದೇಶವಿದೆ.
ತಾಂಡ ರೋಜ್ಗಾರ್ ಮಿತ್ರದ ಅಡಿಯಲ್ಲಿ ಹೂವಿನಹಡಗಲಿ ತಾಲೂಕಿನ ವಡ್ಡನಹಳ್ಳಿ ತಾಂಡಾ, ಕಗ್ಗಲಗಟ್ಟಿ ತಾಂಡ, ಹುಗಲೂರು ತಾಂಡ, ಕೊಯಿಲಾರಗಟ್ಟಿ ತಾಂಡ, ಅಂಕ್ಲಿ ತಾಂಡ, ಕಾಲ್ವಿ ತಾಂಡಗಳನ್ನು ಆಯ್ಕೆ ಮಾಡಿದ್ದು, ಈ ವ್ಯಾಪ್ತಿಯಲ್ಲಿ 9 ಮಂದಿ ವಿದ್ಯಾವಂತ ಯುವಕ- ಯುವತಿಯರು ಕೆಲಸ ಮಾಡುತ್ತಿದ್ದಾರೆ.
ಗುಳೆ ಹೋಗದಂತೆ ಜಾಗೃತಿ:
ವಡ್ಡನಹಳ್ಳಿ ತಾಂಡ ಜನತೆ ಗುಳೆ ಹೋಗದಂತೆ ಜಾಗೃತಿ ಮೂಡಿಸುತ್ತಾ, ಕಾಫಿ ಸೀಮೆಯಲ್ಲಿ ಸಿಗುವಷ್ಟು ಕೂಲಿ ಸ್ಥಳೀಯವಾಗಿ ನರೇಗಾದಲ್ಲಿ ಸಿಗಲಿದೆ. ನಿಮ್ಮ ಜಮೀನುಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ನರೇಗಾದಲ್ಲಿ ಅಗತ್ಯ ಹಣ ಸಿಗಲಿದೆ. ತೋಟ ಮಾಡಿಕೊಂಡು ಮನೆಗೆ ಆದಾಯ ಪಡೆಯಿರಿ ಎಂದು ಹೇಳುವ ಮೂಲಕ 350ಕ್ಕೂ ಅಧಿಕ ಕಾರ್ಮಿಕರು ಗುಳೆ ಹೋಗೋದನ್ನ ತಪ್ಪಿಸಿ, ಸ್ಥಳೀಯವಾಗಿಯೇ ನರೇಗಾ ಕೆಲಸ ಮಾಡಿಸಲಿಕ್ಕೆ ಪ್ರೇರಣೆಯಾಗಿದ್ದಾರೆ ನೇತ್ರಾಬಾಯಿ.
ಕುಟುಂಬದ ಜವಾಬ್ದಾರಿ:
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆಗೆ ಸ್ಪರ್ಧೆಗೆ ಹೋಗಲು ತಾಲೂಕಿನ ಜನತೆ ಸಹಾಯ ಮಾಡಿದ್ದಾರೆ. ಮನೆಯ ಜವಾಬ್ದಾರಿ ಹೊತ್ತಿರುವ ನನಗೆ ದಾರಿ ತೋರಿಸಿದ್ದು ನರೇಗಾ ಯೋಜನೆ. ಕಾರ್ಮಿಕರು ಗುಳೆ ಹೋಗೋದನ್ನು ತಪ್ಪಿಸಿ ಅವರಿಗೆ ಸ್ವಂತ ಊರಿನಲ್ಲೇ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲಾಗುತ್ತಿದೆ. ವಾಸಕ್ಕೆ ಯೋಗ್ಯವಾದ ಮನೆ ಇಲ್ಲ, ಮಳೆ ಬಂದರೆ ಮನೆ ತುಂಬಾ ನೀರು, ಹೊಸ ಮನೆ ಕಟ್ಟಿಕೊಳ್ಳುವಷ್ಟು ಸಿರಿವಂತಿಕೆ ನನಗಿಲ್ಲ. ನರೇಗಾದಿಂದ ಬಂದ ಹಣದಲ್ಲೇ ಕುಟುಂಬ ನಡೆಸುವ ಜವಾಬ್ದಾರಿ ನನ್ನ ಮೇಲಿದೆ ಎನ್ನುತ್ತಾರೆ ನೇತ್ರಾಬಾಯಿ.
ಇದನ್ನೂ ಓದಿ: ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ನರೇಗಾ ಹಾಗೂ ಲಂಬಾಣಿ ತಾಂಡ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆರಂಭಿಸಿರುವ ತಾಂಡ ರೋಜ್ಗಾರ್ ಮಿತ್ರದಡಿ 6 ತಾಂಡಗಳಲ್ಲಿ ಕೆಲಸ ನಡೆಯುತ್ತಿದೆ. ವಡ್ಡನಹಳ್ಳಿ ತಾಂಡದ ಕರಾಟೆ ಪಟು ನೇತ್ರಾಬಾಯಿ ಯಾವುದೇ ಹಮ್ಮಿಬಿಮ್ಮು ತೋರದೆ ಕಾರ್ಮಿಕರ ಮನೆ ಬಾಗಿಲಿಗೆ ಹೋಗಿ ಗುಳೆ ಹೋಗೋದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಕೆಲಸ ಕೊಡಿಸುವ ಪ್ರಯತ್ನದಲ್ಲಿದ್ದಾರೆಂದು ಹೂವಿನಹಡಗಲಿ ತಾಲೂಕು ಪಂಚಾಯತ್ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ ತಿಳಿಸಿದ್ದಾರೆ.