ಬಳ್ಳಾರಿ: ಅರಣ್ಯ ಕಾಯ್ದೆ ಉಲ್ಲಂಘನೆಯನ್ನು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪ್ರಕರಣಕ್ಕೆ ಹೋಲಿಕೆ ಮಾಡಿದ್ದ ಸಚಿವ ಆನಂದ್ ಸಿಂಗ್ ಮೇಲೆ ಗಣಿ ಉದ್ಯಮಿ ಟಪಾಲ್ ಗಣೇಶ್ ಕೆಂಡ ಕಾರಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಅರಣ್ಯ ಇಲಾಖೆ ಕಾಯ್ದೆ ಉಲ್ಲಂಘನೆಯನ್ನು ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಹೋಲಿಸಿ ಮಾತಾಡುವ ಮೂಲಕ ಆನಂದ್ ಸಿಂಗ್ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಒಂದು ಜವಾಬ್ದಾರಿಯುತ ಸಚಿವ ಸ್ಥಾನವನ್ನ ಅಲಂಕರಿಸಿದ ಅವರು ಈ ರೀತಿಯ ಮಾತುಗಳನ್ನಾಡಿರೋದು ನಿಜಕ್ಕೂ ಖೇದಕರ ಎಂದರು.
ನಿಮಗೇನಾದ್ರೂ ತಾಕತ್ತಿದ್ದರೆ ಸಾರ್ವಜನಿಕ ಹೇಳಿಕೆಗೆ ಬದ್ಧನಾಗಿರಬೇಕು. ತಮ್ಮ ವಕೀಲರ ಮೂಲಕ ಘನ ನ್ಯಾಯಾಲಯಕ್ಕೆ ಅರಣ್ಯ ಕಾಯ್ದೆ ಉಲ್ಲಂಘನೆಯನ್ನು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದಂತೆ ಎಂಬ ಹೇಳಿಕೆಯನ್ನೇ ನಮೂದಿಸಿ ಅಫಿಡವಿಟ್ ಸಲ್ಲಿಸಬೇಕು. ಇಲ್ಲಾಂದ್ರೆ ನಾನು ಘನ ಸರ್ವೋಚ್ಛ ನ್ಯಾಯಾಲಯಕ್ಕೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದ್ದಾರೆ.
ಬಿಜೆಪಿ ಪಕ್ಷ ಇಂತಹವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ನಾಚಿಕೆಯಾಗಬೇಕು ಅಂತಾ ಟಪಾಲ್ ಗಣೇಶ್ ಈಟಿವಿಗೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ.