ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿರುವ ಬಗ್ಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿಂದು ಈ ಟಿವಿ ಭಾರತದೊಂದಿಗೆ ಅವರು ಮಾತನಾಡಿ, ತಮ್ಮ ಮಗಳ ಮದುವೆಯನ್ನು ಸಿಂಪಲ್ ಆಗಿ ಮಾಡುತ್ತಿರೋದಾಗಿ ಮಾಧ್ಯಮಗಳ ಎದುರು ಹೇಳಿ ಕೊಂಡಿರುವ ಸಚಿವ ಶ್ರೀರಾಮುಲು ಅವರು ಬರೀ ಬಾಯಿ ಮಾತಲ್ಲಿ ಸಿಂಪ್ಲಿಸಿಟಿ ಅಂದ್ರೆ ಸಾಕಾಗೋದಿಲ್ಲ. ಆಚರಣೆಯಲ್ಲೂ ಸರಳತೆ ಇರಬೇಕು. ಅರಮನೆ ಎಂದ್ರೆ ಸರಳತೆ ಅಂತಾಗುತ್ತಾ ಎಂಬುದನ್ನು ಸಾರ್ವಜನಿಕರು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸರಳ ಜೀವನ ನೋಡಿದ್ರೆ ನಮಗೆ ಅಚ್ಚರಿಯಾಗುತ್ತೆ. ಈ ರಾಜ್ಯದಲ್ಲಿ ಬರ ಹಾಗೂ ನೆರೆ ಹಾವಳಿಯಂತಹ ಸನ್ನಿವೇಶಗಳು ಎದುರಾಗಿದ್ದರೂ ಕೂಡ ಹಿಂದುಳಿದ ನಾಯಕರಾದ ಸಚಿವ ಬಿ.ಶ್ರೀರಾಮುಲು ಅವರು ತಮ್ಮ ಮಗಳ ಮದುವೆಯನ್ನ ಇಷ್ಟೊಂದು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿರೋದು ಎಷ್ಟು ಸರಿ?.
ಇವತ್ತು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ಬೀಟರ್ ಹಾಗೂ ಇನ್ಸ್ಟಾಗ್ರಾಂ, ಯೂಟ್ಯೂಬ್ಗಳಲ್ಲಿ ನೋಡಿದ್ರೆ ಗೊತ್ತಾಗುತ್ತೆ ಸಚಿವರ ಸಿಂಪ್ಲಿಸಿಟಿ ಏನು ಅಂತ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯವರು ಇಂಥ ಅದ್ಧೂರಿ ಮದುವೆ ಸಮಾರಂಭಗಳಿಗೆ ಕಡಿವಾಣ ಹಾಕಬೇಕು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಮದುವೆ ಮಾಡಿಕೊಳ್ಳುವ ಕಾನೂನನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.