ಬಳ್ಳಾರಿ: ಕುರಿಗಾಹಿ ಹಾಗೂ ಕೃಷಿ ಕಾಯಕದಲ್ಲಿ ತೊಡಗಿಕೊಂಡ ದಂಪತಿಯ ಪುತ್ರಿ ತಳವಾರ ಶಿಲ್ಪರವರು (ಟಿ. ಶಿಲ್ಪ) ಪಿ.ಯು. ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿ ವಿಜ್ಞಾನ ವಿಭಾಗದಲ್ಲಿ 562 (ಶೇ.93.62) ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮುಟುಗನಹಳ್ಳಿ ಗ್ರಾಮದ ತಳವಾರ ಹನುಮಂತಪ್ಪ ನಿತ್ಯ ಕುರಿಗಾಹಿ ಮತ್ತು ವ್ಯವಸಾಯದಲ್ಲಿ ತೊಡಗಿಕೊಂಡಿರುವ ಕೃಷಿಕ. ಪತ್ನಿ ಚಂದ್ರಮ್ಮ ಪತಿಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದು, ಇವರಿಗೆ ಶಿಕ್ಷಣವಿಲ್ಲ.
ಇವರ ಕೂಡು ಕುಟುಂಬದಲ್ಲಿ ಏಳು ಮಂದಿ ಸಹೋದರರನ್ನು ಹೊಂದಿರುವ ಬಹುದೊಡ್ಡ ಕುಟುಂಬವಾಗಿದ್ದರೂ ಈ ದಂಪತಿಯ ಮಕ್ಕಳಲ್ಲಿ ಹಿರಿಯ ಮಗ ಬಿಎಸ್‍ಸಿ 3ನೇ ವರ್ಷ, ಮಗಳು ದ್ವಿತೀಯ ಬಿಕಾಂ, ಕೊನೆಯ ಮಗಳು ಟಿ. ಶಿಲ್ಪ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದ್ಯ ಶಿಲ್ಪ 2019-20ರ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಟಿ. ಶಿಲ್ಪ ತಾಲೂಕಿನ ವರಲಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.91 ಅಂಕಗಳನ್ನು ಪಡೆದಿದ್ದರು. ನಂತರ ಪಟ್ಟಣದ ಮೆಟ್ರಿಕ್ ಪೂರ್ವ ಸರ್ಕಾರಿ ವಿದ್ಯಾರ್ಥಿನಿಯರ ನಿಲಯದಲ್ಲಿ ಇದ್ದುಕೊಂಡು, ಇಲ್ಲಿನ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದರು. ಸದ್ಯ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಿಲ್ಪರವರ ಉತ್ತಮ ಫಲಿತಾಂಶಕ್ಕೆ ಪೋಷಕರು ಮತ್ತು 20ಕ್ಕೂ ಹೆಚ್ಚು ಜನರಿರುವ ಇಡೀ ಕುಟುಂಬವೇ ಹರ್ಷ ವ್ಯಕ್ತಪಡಿಸಿದೆ.
ವಿದ್ಯಾರ್ಥಿನಿ ತಳವಾರ ಶಿಲ್ಪರವರ ಅಭಿಪ್ರಾಯ: ಈ ಫಲಿತಾಂಶ ನಿರೀಕ್ಷಿಸಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರ ಉತ್ತಮ ಉಪನ್ಯಾಸ, ಅಕ್ಕ-ಅಣ್ಣನ ಮಾರ್ಗದರ್ಶನ, ದೊಡ್ಡಪ್ಪ- ಚಿಕ್ಕಪ್ಪಂದಿರ ಪ್ರೋತ್ಸಾಹ, ಎಲ್ಲಾ ಸಹೋದರ-ಸಹೋದರಿಯರ ಸಹಕಾರದಿಂದ ಇಂದು ಉತ್ತಮ ಫಲಿತಾಂಶ ಬಂದಿದೆ. ಮುಂದೆ ಅವಕಾಶ ದೊರೆತರೆ ಎಂಬಿಬಿಎಸ್ ಅಥವಾ ಬಿಎಸ್‍ಸಿ ಅಗ್ರಿ ಶಿಕ್ಷಣವನ್ನು ಪಡೆಯಬೇಕು ಎನ್ನುವ ಇಚ್ಛೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪದವಿಪೂರ್ವ ಕಾಲೇಜಿನ ಫಲಿತಾಂಶ: ಕಲಾ ವಿಭಾಗದಲ್ಲಿ 4 ಡಿಸ್ಟಿಂಕ್ಷನ್, ವಾಣಿಜ್ಯ ವಿಭಾಗದಲ್ಲಿ 14 ಡಿಸ್ಟಿಂಕ್ಷನ್, ವಿಜ್ಞಾನ ವಿಭಾಗದಲ್ಲಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ಕಾಲೇಜಿನ 627 ವಿದ್ಯಾರ್ಥಿಗಳ ಪೈಕಿ 335 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.49ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ 26 ಡಿಸ್ಟಿಂಕ್ಷನ್, 177 ಪ್ರಥಮ, 72 ದ್ವಿತೀಯ, 60 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ತಿಳಿಸಿದ್ದಾರೆ.