ಬಳ್ಳಾರಿ: ಕಳೆದ ಮೂರು ವಾರಗಳಿಂದ ಕರ್ನಾಟಕ ಆಂಧ್ರ ಪ್ರದೇಶ ರಾಜ್ಯಗಳ ಗಡಿ ಸರ್ವೇಕಾರ್ಯ ಹಾಗೂ ಗಡಿ ಗುರುತು ಕಲ್ಲುಗಳನ್ನ ಹೂಳುವ ಕಾರ್ಯ ನಡೆದಿರುವ ಹಿನ್ನೆಲೆ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಗಳಿಗೆ ಭೇಟಿ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರಿಗೆ ಬಳ್ಳಾರಿ, ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡುವ ಆಸೆ ಈಗ ನಿರಾಶದಾಯಕವಾಗಿದೆ. ರೆಡ್ಡಿ ಈ ಮೂರು ಜಿಲ್ಲೆಗಳಿಗೆ ಭೇಟಿ ಕೊಡಲು ಅನುಮತಿ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಸಿಬಿಐ ಕೋರ್ಟ್ ನಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ, ಸದ್ಯ ಕರ್ನಾಟಕ ಆಂಧ್ರ ಪ್ರದೇಶ ರಾಜ್ಯಗಳ ಗಡಿಸರ್ವೇ ಹಾಗೂ ಗಡಿ ಗುರುತು ಗುರುತಿಸುವ ಕಾರ್ಯವು ನಡೆದಿದ್ದು, ಬಳ್ಳಾರಿಯಲ್ಲಿ ಸಾಕ್ಷ್ಯ ನಾಶಕ್ಕೆ ಪ್ರಯತ್ನ ನಡೆಸಬಹುದು.
ಈ ಹಿಂದೆ ತನಿಖಾಧಿಕಾರಿಗಳ ವಾಹನ ಕೂಡ ಸುಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ಪೊಲೀಸ್ ಭದ್ರತೆಯಲ್ಲಿದ್ದು, ಆದರೂ ಅವರನ್ನು ಬೆದರಿಸಲಾಗುತ್ತಿದೆ. ಒಟ್ಟಾರೆಯಾಗಿ 47 ಸಾಕ್ಷ್ಯಗಳು ಬಳ್ಳಾರಿಯಲ್ಲಿವೆ. ಗಾಲಿ ಜನಾರ್ದನರೆಡ್ಡಿ ಬಳ್ಳಾರಿ ಪ್ರವೇಶಿಸಿದರೇ ಏನು ಬೇಕಾದರೂ ಆಗಬಹುದು. ಇಡೀ ಪ್ರಕರಣದ ಪ್ರಮುಖ ಆರೋಪಿಗೆ ಬಳ್ಳಾರಿ ಪ್ರವೇಶಿಸಲು ಅನುಮತಿ ನೀಡಿದರೆ ತನಿಖೆ ನಡೆಸೋದು ಕಷ್ಟಸಾಧ್ಯವಾಗಲಿದೆ ಎಂದು ಸಿಬಿಐ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಿಬಿಐ ವಾದಕ್ಕೆ ರೆಡ್ಡಿ ಪರ ವಾದ ಮಂಡಿಸಿದ ವಕೀಲ ಮುಕುಲ್ ರೊಹ್ಟಗಿ ಅವರು ಸಿಬಿಐ ನಡೆಗೆ ಅತೀವ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಬಿಐ ವಾದದಲ್ಲಿ ಸತ್ಯಾಂಶವಿಲ್ಲ. ನಾವು ಐದು ವರ್ಷದಿಂದ ಯಾವುದೇ ಅರ್ಜಿ ಸಲ್ಲಿಸಿಲ್ಲ. ಸಾಕ್ಷ್ಯ ನಾಶಕ್ಕೆ ಪ್ರಯತ್ನವೂ ಕೂಡ ನಡೆದಿಲ್ಲ. ಬೇರೆಯವರು ಅವಕಾಶ ಕೋರಿ ಅರ್ಜಿ ಸಲ್ಲಿಸಿದರೇ ನಾವು ಹೊಣೆಯಲ್ಲ. ಎರಡು ಬದಿಯ ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್ ಡಿಸೆಂಬರ್ ತಿಂಗಳೊಳಗೆ ಈ ಕುರಿತು ವಿಸ್ತೃತವಾದ ವರದಿ ನೀಡುವಂತೆ ಸಿಬಿಐಗೆ ಸೂಚನೆ ನೀಡಿದೆ.