ಹೊಸಪೇಟೆ: ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ವಿಜಯನಗರ ದೃಷ್ಟಿ ದೋಷವುಳ್ಳವರ ಚದುರಂಗ ಟೂರ್ನಮೆಂಟ್ ಸೀಜನ್-2ಗೆ ಚಾಲನೆ ನೀಡಲಾಯಿತು.
ಓಪನ್ ಟೂರ್ನಮೆಂಟ್ ಇದಾಗಿದ್ದು, ಯಾವುದೇ ವಯಸ್ಸಿನ ಮಿತಿ ಇರಲಿಲ್ಲ. ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಹಾಗೂ ರೋಟರಿ ಕ್ಲಬ್ ಜಂಟಿಯಾಗಿ ಟೂರ್ನಿ ಆಯೋಜಿಸಿವೆ. ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಈ ಹಿಂದೆ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ 72 ಜನರು ಕ್ರೀಡಾಪಟುಗಳ ನೋಂದಣಿ ಆಗಿತ್ತು. ಆ ಟೂರ್ನಿ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಈ ಟೂರ್ನಮೆಂಟ್ನಲ್ಲಿ 120 ಆಟಗಾರರು ನೋಂದಣಿಯಾಗಿದ್ದು, ಇದು ನೂತನ ದಾಖಲೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
9 ಸುತ್ತಿನ ಪಂದ್ಯಾವಳಿ ಇದಾಗಿದೆ. ಟೂರ್ನಿಯಲ್ಲಿ ವಿಜಯಶಾಲಿಗಳು ನ್ಯಾಷನಲ್ ಲೆವೆಲ್ಗೆ ಆಯ್ಕೆ ಆಗಲಿದ್ದಾರೆ. 20 ಜನ ವಿಜೇತರಿಗೆ ಒಟ್ಟು 50 ಸಾವಿರ ಬಹುಮಾನವನ್ನು ನೀಡಲಾಗುತ್ತದೆ. ಚಿಕ್ಕಬಳ್ಳಾಪುರ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಅಂತರರಾಷ್ಟ್ರೀಯ ಚದುರಂಗ ಪಟು ಶ್ರೀಕೃಷ್ಣ ಉಡುಪ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ ಎಂದರು.