ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ನಿನ್ನೆಯಷ್ಟೇ ಶಕುನಿಗೆ ಹೋಲಿಕೆ ಮಾಡಿದ್ದ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಇಂದೂ ಕೂಡ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಶಾಸಕ ಶ್ರೀರಾಮುಲು ಸರಣಿ ಟ್ವೀಟ್ ಮಾಡುವ ಮುಖೇನ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಕೆಣಕಿದ್ದಾರೆ. ಮೂರು ಪ್ರತ್ಯೇಕ ಟ್ವೀಟ್ ಮಾಡಿದ್ದು, ಒಂದೊಂದು ಕೂಡ ವಿಭಿನ್ನವಾಗಿದೆ.
ಶಿವಕುಮಾರ ಅಣ್ಣನವರೇ, ನಾನು ಬಳ್ಳಾರಿಯ ಮಣ್ಣಿನ ಮಗ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಹೋಗುವ ನಿಮ್ಮನ್ನು ಜನ ಶಿವಕುಮಾರ ಎಲ್ಲಿದ್ದೀಯಪ್ಪ ಎನ್ನುತ್ತಿದ್ದಾರೆ. ಬಳ್ಳಾರಿಯ ಜನ ವಲಸೆ ಬಂದವರಿಗೆ ತಮ್ಮ ಸ್ವಾಭಿಮಾನದಿಂದ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಿಸಿದ್ದಾರೆ ಎಂದು ಮೊದಲನೇ ಟ್ವೀಟ್ ನಲ್ಲಿ ಕಾಲೆಳೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಅನ್ನು ಕುಮಾರಸ್ವಾಮಿಯವರ ಮೇಲಿನ ನಿಮ್ಮ ಕುರುಡು ಪ್ರೇಮಕ್ಕಾಗಿ ಒಂದಂಕಿಗೆ ಇಳಿಸಿದ ಕೀರ್ತಿ ನಿಮಗೆ ಸಲ್ಲಬೇಕು. ಬಳ್ಳಾರಿಯ ಜನರ ಪ್ರೀತಿಯ ಬಗ್ಗೆ ಮಾತನಾಡುವ ನೀವು, ಬಳ್ಳಾರಿಯವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಎರಡನೇ ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.
ಶುಭಮಹೂರ್ತ, ಶುಭ ಗಳಿಗೆಯಲ್ಲಾದರೂ ಇನ್ಮುಂದೆ ಕೇವಲ ಚುನಾವಣಾ ಸಚಿವರಾಗದೆ ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿ ಎಂದು ನಿಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇನೆ ಅಣ್ಣ ಎಂದು ಮೂರನೇ ಟ್ವೀಟ್ ನಲ್ಲಿ ಕೋರಿದ್ದಾರೆ.