ಬಳ್ಳಾರಿ : ರಾಜ್ಯದಲ್ಲಿ ಬಹುತೇಕ ಕೋವಿಡ್ ಸೋಂಕಿತರಿಗೆ ಹೋಮ್ ಐಸೋಲೇಷನ್ನಲ್ಲಿರಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಸೋಂಕು ಮನೆ ಮಂದಿಗೆಲ್ಲಾ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಹೀಗಾಗಿ, ಹೋಮ್ ಐಸೋಲೇಷನ್ ಕ್ಯಾನ್ಸಲ್ ಮಾಡಬೇಕೆಂದು ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿಂದು ನಡೆದ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣಾ ಕುರಿತ ಪರಿಶೀಲನಾ ಸಭೆಯಲ್ಲಿ ಸಚಿವ ಶ್ರೀರಾಮುಲು ಮಾತನಾಡಿ, ಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರು ಗಂಭೀರವಾಗಿ ಮನೆಯಲ್ಲೇ ಇರಲ್ಲ. ಹೀಗಾಗಿ, ಮನೆಮಂದಿಗೆಲ್ಲಾ ಈ ಸೋಂಕು ಹರಡೋಕೆ ಕಾರಣವಾಗುತ್ತಿದೆ ಎಂದರು.
ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಾರ್ವಜನಿಕರಿಗೂ ಕೋವಿಡ್ ಸೋಂಕು ಹರಡೋಕೆ ಬಹಳ ಸಾಧ್ಯತೆ ಇರುತ್ತೆ. ಹೀಗಾಗಿ, ಹೋಮ್ ಐಸೋಲೇಷನ್ ಅನ್ನು ಕ್ಯಾನ್ಸಲ್ ಮಾಡಿ.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಹಾಸ್ಟೆಲ್ಗಳಲ್ಲಿ ಕೋವಿಡ್ ಸೋಂಕಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸಚಿವ ಶ್ರೀರಾಮುಲು ಹೇಳಿದರು.