ಬಳ್ಳಾರಿ: ವೈಯಕ್ತಿಕ ಕಾರಣಗಳಿಂದ ಜಿಗುಪ್ಸೆಗೊಂಡಿದ್ದು ನಾನು ರಾಜಕೀಯದಿಂದ ದೂರು ಉಳಿದಿದ್ದೆ ಎಂದು ಮಾಜಿ ಸಚಿವ ಎಸ್.ಸಂತೋಷ್ ಲಾಡ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ 18ನೇ ವಯಸ್ಸಿಗೆ ನಾನು ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವೆ. ಆದರೆ, ನನ್ನ ವೈಯಕ್ತಿಕ ಕಾರಣಗಳಿಂದಾಗಿ ಜಿಗುಪ್ಸೆಗೊಂಡು ನನ್ನಷ್ಟಕ್ಕೆ ನಾನೇ ರಾಜಕೀಯದಿಂದ ದೂರ ಉಳಿದಿರುವೆ. ಯಾವುದೇ ರಾಜಕೀಯ ವಿಚಾರಗಳಿಂದಲ್ಲ ಎಂದರು.
ಜಿಲ್ಲೆಯ ಕಾಂಗ್ರೆಸ್ಸಿನಲ್ಲಿ ಬಂಡಾಯ, ಭಿನ್ನಾಭಿಪ್ರಾಯವಿದೆ. ಅದನ್ನು ಶಮನಗೊಳಿಸಲು ಡಿ.ಕೆ.ಶಿವಕುಮಾರ ಪ್ರಯತ್ನ ನಡೆಸಿದ್ದಾರೆ. ಎಲ್ಲವನ್ನೂ ಸರಿಪಡಿಸಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಸಲಾಗುವುದು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತ ಬಳಿಕ ಬೇಸರಗೊಂಡು ಒಂದಷ್ಟು ದಿನ ರಾಜಕೀಯದಿಂದ ದೂರ ಉಳಿದಿದ್ದೆ. ಈಗ ನಾನು ಕ್ರಿಯಾಶೀಲನಾಗಿರುವೆ. ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ. ಕಾಂಗ್ರೆಸ್ಸಿನಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಲಾಗುವುದು. ಶಾಸಕ ಭೀಮಾ ನಾಯ್ಕ್ ಮನವೊಲಿಸಲು ಪ್ರಯತ್ನ ಮಾಡಿ ಪಕ್ಷದ ಪರ ಪ್ರಚಾರ ಮಾಡಲು ಕರೆತರಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ತಯಾರಿಸಿದ ಪ್ರಣಾಳಿಕೆ ಜನಾಭಿಪ್ರಾಯದಿಂದ ಕೂಡಿದೆ. ರಾಜಕೀಯ ಕಾರಣಕ್ಕಾಗಿ ಮಾಡಿದ ಪ್ರಣಾಳಿಕೆ ಅಲ್ಲ ಎಂದರು.
ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅಪ್ಪಾಜಿ ನಾಡಗೌಡ ಮಾತನಾಡಿ, ಈ ದೇಶದಲ್ಲಿನ ಬಡತನ ನಿರ್ಮೂಲನೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದರು. ಬಡತನ ನಿರ್ಮೂಲನೆ ಸಲುವಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರತಿ ಬಡ ಕುಟುಂಬಗಳಿಗೆ ಮಾಸಿಕವಾಗಿ 6,000 ರೂ.ಗಳಂತೆ 72,000 ರೂ.ಗಳನ್ನ ಅವರವರ ಖಾತೆಗಳಿಗೆ ಜಮೆ ಮಾಡುವ ವಿಶಿಷ್ಠ ಯೋಜನೆಯನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಳೆದ 70 ವರ್ಷಗಳಕಾಲ ಕಾಂಗ್ರೆಸ್ ಬಡತನ ನಿರ್ಮೂಲನೆಗೆ ಶ್ರಮಿಸುತ್ತಾ ಬಂದಿದೆ. ಅದಕ್ಕೆ ತಾಜಾ ಉದಾಹರಣೆ ಎಂದರೆ, ನರೇಗಾ ಯೋಜನೆ ಸೇರಿ ಇತರೆ ಯೋಜನೆಗಳು ಎಂದು ತಿಳಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾತನಾಡಿ, ನಾವು ಕೊಟ್ಟ ವಾಗ್ದಾನಗಳಿಂದ ಜಾರಿಕೊಳ್ಳುವ ಪ್ರಶ್ನೆಯೇ ಇಲ್ಲ. ದೇಶದ್ರೋಹ ಕಾಯಿದೆಯನ್ನ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಹಾಕಿದ್ದರು. ಕಾಂಗ್ರೆಸ್ ಪಕ್ಷ ಈ ಕಾನೂನನ್ನ ದೇಶದ್ರೋಹಿಗಳ ಮೇಲೆ ಜಾರಿ ಮಾಡಿತ್ತು. ಆದರೆ, ದೇಶದ್ರೋಹ ಕಾನೂನನ್ನ ಬಿಜೆಪಿಯವರು ವಿವಿಯ ವಿದ್ಯಾರ್ಥಿ ಹೋರಾಟಗಾರರ ಮೇಲೆ ಹಾಗೂ ಮೋದಿ, ಬಿಜೆಪಿ ವಿರುದ್ಧ ಮಾತಾಡಿದವರ ಮೇಲೆ ಬಳಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರಲಾರದಂತೆ ಮಾಡುತ್ತೇವೆ ಎಂದು ತಮ್ಮ ಪಕ್ಷದ ಸಾಧನೆ ಬಿಚ್ಚಿಟ್ಟರು.
ಸಚಿವ ಈ.ತುಕರಾಂ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಪದ್ಮಾ, ಜಿಲ್ಲಾ ಪಂಚಾಯತ್ ಸದಸ್ಯ ಅಲ್ಲಂ ಪ್ರಶಾಂತ, ಮುಂಡರಗಿ ನಾಗರಾಜ, ಎ.ಮಾನಯ್ಯ, ಮುಖಂಡರಾದ ಬಿ.ವಿ.ಶಿವಯೋಗಿ, ಕೆ.ಎಸ್.ಎಲ್.ಸ್ವಾಮಿ, ಜೆ.ಎಸ್. ಆಂಜನೇಯಲು, ಜಿ.ಕಮಲಾ, ಅಸುಂಡಿ ಹೊನ್ನೂರಪ್ಪ, ಅಸುಂಡಿ ನಾಗರಾಜಗೌಡ, ಜೆಡಿಎಸ್ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ ಇದ್ದರು.