ಬಳ್ಳಾರಿ: ಜಿಲ್ಲೆಯಲ್ಲಿ ಆಳವಾದ ತಗ್ಗು-ದಿನ್ನೆ ಹಾಗೂ ಧೂಳಿನಿಂದ ಕೂಡಿದ ರಸ್ತೆಗಳಲ್ಲೇ ಜನರು ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬಳ್ಳಾರಿಯಿಂದ ಹೊಸಪೇಟೆ ತಾಲೂಕಿಗೆ (66 ಕಿ.ಮೀ.) ಪ್ರಯಾಣ ಬೆಳೆಸಲು ಸುಮಾರು ಎರಡೂವರೆ ಗಂಟೆ ಬೇಕಾಗುತ್ತದೆ. ಇನ್ನು ಮಳೆಗಾಲದಲ್ಲಿ ವಾಹನ ಸವಾರರು ಮತ್ತಷ್ಟು ನರಕ ಅನುಭವಿಸುತ್ತಾರೆ.
ಬಳ್ಳಾರಿ ನಗರದಿಂದ ಕುಡಿತಿನಿಗೆ ತಲುಪಲು ಕಾಲು ಗಂಟೆ, ಕುಡಿತಿನಿ ಪಟ್ಟಣದಿಂದ ತೋರಣಗಲ್ಲಿಗೆ ತೆರಳಲು ಮುಕ್ಕಾಲು ಗಂಟೆ ಬೇಕಾಗುತ್ತದೆ. ಈ ಮಾರ್ಗದಲ್ಲಿ ದೊಡ್ಡದಾದ ಮತ್ತು ಆಳುದ್ದ ಗುಂಡಿಗಳೇ ಹೆಚ್ಚಿದ್ದು, ಲಘು ಮತ್ತು ಭಾರೀ ವಾಹನಗಳು ಸೇರಿದಂತೆ ಕೆಎಸ್ಆರ್ಟಿಸಿ ಬಸ್ಗಳೂ ಈ ಮಾರ್ಗದಲ್ಲೇ ಸಂಚರಿಸುತ್ತಿವೆ. ಇವತ್ತು ನಾವು ಮನೆ ಮುಟ್ಟಿದ ಹಾಗೆ ಎಂದು ಸವಾರರು ಗೊಣಗೋದಂತೂ ನಿಜ. ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ರಸ್ತೆಗಳಿವೆ.
ಜನಪ್ರತಿನಿಧಿಗಳು ಡೋಂಟ್ ಕೇರ್: ಜಿಲ್ಲೆಯ ಜನಪ್ರತಿನಿಧಿಗಳಂತು ಐಷಾರಾಮಿ ಕಾರಿನಲ್ಲಿ ಕಿತ್ತು ಹೋಗಿರುವ ರಸ್ತೆಗಳಲ್ಲೇ ಸಂಚರಿಸುತ್ತಾರೆ. ಆದರೆ ಸಾರ್ವಜನಿಕರ ಮನವಿಯನ್ನು ಕೇಳುವುದೇ ಇಲ್ಲ. ಇನ್ನು ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳು ಅಧೋಗತಿಯತ್ತ ಸಾಗಿವೆ. ಹೀಗಾಗಿ ಮಹಾನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಮಹಾನಗರದ 18 ಪ್ರಮುಖ ರಸ್ತೆಗಳ ಪುನರ್ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ಡಿಎಂಎಫ್ನಿಂದ ಅಭಿವೃದ್ಧಿಪಡಿಸಲಾಗುದು ಎಂದರು.