ಬಳ್ಳಾರಿ: ಶಾಸಕ ಆನಂದಸಿಂಗ್ ರಾಜೀನಾಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತ ಮುಖಂಡರು ಹೊಸಪೇಟೆ ನಗರದ ಆನಂದಸಿಂಗ್ ಮನೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಅವರ ವಿರುದ್ಧ ಧಿಕ್ಕಾರ ಕೂಗಿದ್ದು, ರಾಜೀನಾಮೆ ಹಿಂಪಡೆಯಿರಿ ಎಂದು ಘೋಷಣೆ ಕೂಗಿದರು.
ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ವಿ.ಶಿವಯೋಗಿ ನೇತೃತ್ವದಲ್ಲಿ ಹತ್ತಾರು ಮುಖಂಡರು ಶಾಸಕ ಆನಂದಸಿಂಗ್ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಘೋಷಣೆ ಕೂಗುತ್ತಿದ್ದಂತೆಯೇ ಮನೆಯಿಂದ ಹೊರಬಂದ ಶಾಸಕ, ರಾಜೀನಾಮೆ ಕುರಿತು ನಾನು ಪಕ್ಷದ ಮುಖಂಡರೊಂದಿಗೆ ಮಾತನಾಡುವೆ. ದಯವಿಟ್ಟು ನೀವು ಇಲ್ಲಿಂದ ಹೋಗಿ ಎಂದು ಹೇಳಿ ಪುನಃ ಮನೆಯೊಳಗೆ ಹೋಗಿದ್ದಾರೆ. ಇದರಿಂದ ಸಮಾಧಾನರಾಗದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದರು. ಶಾಸಕ ಆನಂದಸಿಂಗ್ ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಕೂಡಲೇ ರಾಜೀನಾಮೆಯನ್ನು ವಾಪಾಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಏನೇ ಭಿನ್ನಾಭಿಪ್ರಾಯ ಇದ್ದರೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಬಗೆಹರಿಸಿ ಕೊಳ್ಳಬೇಕೆಂದು ಮುಖಂಡ ಬಿ.ವಿ.ಶಿವಯೋಗಿ ತಿಳಿಸಿದ್ದಾರೆ. ಮುಖಂಡರಾದ ಜೆ.ಎಸ್.ಆಂಜನೇಯಲು, ವೆಂಕಟೇಶ ರೆಡ್ಡಿ, ಅಬ್ದುಲ್ ವಹಾಬ್, ನಿಂಬುಗಲ್ ರಘು ಸೇರಿದಂತೆ ಇನ್ನಿತರೆ ಮುಖಂಡರು ಈ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.