ಬಳ್ಳಾರಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿಯ ನದಿಯ ಕೆಳ ಮಟ್ಟದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಮಾರ್ಗದಲ್ಲಿ ಸಂಚಾರ ಸಾಧ್ಯವಿಲ್ಲದ ಕಾರಣ ತಾಲ್ಲೂಕಿನಿಂದ ಗಡಿಭಾಗದ ಹಳ್ಳಿಗಳಿಗೂ ಮತ್ತು ಆಂಧ್ರದ ಮಂತ್ರಾಲಯ, ಆಲೂರು ಆದ್ವೊನಿ, ತಿರುಪತಿ, ಶ್ರೀಶೈಲ, ಗುಂಟೂರು, ವಿಜಯವಾಡ, ಅನಂತಪುರ ನಗರಗಳಿಗೆ ಹೋಗುವ ವಾಹನಗಳು ಹಚ್ಚೊಳ್ಳಿ ಮಾರ್ಗವಾಗಿ ಸುತ್ತಿಬಳಿಸಿ ತೆರಳುತ್ತಿವೆ.
ರಾರಾವಿ ನದಿ ಕೆಳಮಟ್ಟದ ಸೇತುವೆ ಮಳೆ ನೀರಿನ ಪ್ರವಾಹಕ್ಕೆ ದುರ್ಬಲಗೊಂಡಿದ್ದು, ಶಿಥಿಲಗೊಂಡಿದೆ. ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು , ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಈ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದಾರೆ. ನದಿಯ ಕೆಳಮಟ್ಟದ ಸೇತುವೆ ಮಳೆ ನೀರಿನಲ್ಲಿ ಮುಳುಗಿದ್ದರಿಂದ ರಸ್ತೆ ಕಾಣದಾಗಿದೆ.
ಮಳೆಗಾಲದಲ್ಲಿ ಈ ಸೇತುವೆ ಮುಳುಗುವುದು ಸಾಮಾನ್ಯ, ಇದರಿಂದ ಪ್ರತಿ ಬಾರಿಯೂ 30 ರಿಂದ 40ಕಿ.ಮೀ. ಸುತ್ತುವರಿದು ಪ್ರಯಾಣ ಮಾಡುವುದು ಅನಿವಾರ್ಯತೆ ಇದೆ ಎಂದು ಪ್ರಯಾಣಿಕರು ದೂರಿದ್ದಾರೆ.
ಇದನ್ನೂ ಓದಿ : ರಾಮನಗರ ಮಳೆಹಾನಿ ವೀಕ್ಷಣೆಗೆ ಸಿಎಂ ಆಗಮನ.. ಬೊಮ್ಮಾಯಿಗೆ ಕಾಯುತ್ತಿರುವ ಹೆಚ್‌ಡಿಕೆ