ಬಳ್ಳಾರಿ: ಅಗತ್ಯ ಔಷಧ ಸಿಗದೇ ಕಂಗಾಲಾಗಿದ್ದ ಕ್ಯಾನ್ಸರ್ ರೋಗಿಯೊಬ್ಬರಿಗೆ ಬೆಂಗಳೂರು ಉತ್ತರ ಪೂರ್ವ ವಲಯದ ಕಚೇರಿಯಲ್ಲಿ ಸ್ಥಾಪಿಸಿದ್ದ ಸಹಾಯವಾಣಿ ಮೂಲಕ ಸಹಾಯವಾಗಿದೆ. ಕರೆ ಮಾಡಿದ ಕೇವಲ 24 ಗಂಟೆಗಳೊಳಗೆ ಔಷಧ ಮನೆ ಬಾಗಿಲು ತಲುಪಿದೆ.
ಹೌದು, ಈ ಲಾಕ್ಡೌನ್ ನಡುವೆಯೂ ಬೆಂಗಳೂರಿನಿಂದ ಬಳ್ಳಾರಿಗೆ ಔಷಧ ತಲುಪಿರುವುದು ರೈಡ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ ಸಹಕಾರದಿಂದ. ಈ ಕ್ಲಬ್ ನ ಸದಸ್ಯರಾದ ಮೋಹನ್ ಮಲ್ಲಪ್ಪ, ಶ್ರೀಧರ್ ಮತ್ತು ಮೋಹನ್ ಕೃಷ್ಣ ಅವರು ವಿಷಯ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಬಳ್ಳಾರಿಗೆ ತಮ್ಮ ಮೋಟಾರ್ ಸೈಕಲ್‌ಗಳ ಮೂಲಕ ಆಗಮಿಸಿ ಔಷಧ ತಲುಪಿಸಿದ್ದಾರೆ.
ಇನ್ನೂ, ಔಷಧ ಸ್ವೀಕರಿಸಿದ ಕ್ಯಾನ್ಸರ್ ರೋಗಿ ಜೀವಕ್ಕೆ ಅಗತ್ಯವಿದ್ದ ಔಷಧ ಒದಗಿಸಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ನಂತರ ರೈಡ್ಸ್ ರಿಪಬ್ಲಿಕ್ ಮೋಟಾರ್ ಸೈಕಲ್ ಕ್ಲಬ್ ಸದಸ್ಯರು ಇಲ್ಲಿನ ಐಜಿಪಿ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಈ ವೇಳೆ, ಐಜಿಪಿ ನಂಜುಂಡಸ್ವಾಮಿ ಅವರು ಕರ್ನಾಟಕ ಪೊಲೀಸ್ ತಂಡದೊಂದಿಗೆ ಮಾಡುತ್ತಿರುವ ಸೇವಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.