ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಪ್ರಗತಿಪರ ರೈತ ಮನ್ನೆ ಶ್ರೀಧರ ಅವರಿಗೆ ಕೋವಿಡ್ ಮೊದಲ ಅಲೆಯಲ್ಲಿ ದಾಳಿಂಬೆ ಬೆಳೆ ಕೈಕೊಟ್ಟಿತ್ತು. ಆದರೆ ಎರಡನೇ ಅಲೆಯ ಸಂದರ್ಭದಲ್ಲಿ ಸುಮಾರು 15 ಎಕರೆಯಲ್ಲಿ ಬೆಳೆದಿದ್ದ ಬೆಳೆ ಉತ್ತಮ ಫಸಲು ನೀಡುವ ಹಂತಕ್ಕೆ ತಲುಪಿದ್ದು, ಈ ಮೂಲಕ ಆದಾಯ ಬರುವ ವಿಶ್ವಾಸ ಹೊಂದಿದ್ದಾರೆ.
ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪಿನ ನಿವಾಸಿಯಾದ ಮನ್ನೆ ಶ್ರೀಧರ ಅವರು, ಪ್ರಗತಿಪರ ರೈತ. ರೂಪನಗುಡಿ ಹೋಬಳಿ ವ್ಯಾಪ್ತಿಯ ಬುರ್ರ ನಾಯಕನಹಳ್ಳಿ ಗ್ರಾಮ ಹೊರವಲಯದಲ್ಲಿ ಅಂದಾಜು 15 ಎಕರೆ ಪ್ರದೇಶವನ್ನು ಸಾಗುವಳಿ ಪಡೆದು ಹನಿ ನೀರಾವರಿ (ಡ್ರಿಪ್ ಸಿಸ್ಟಮ್) ವ್ಯವಸ್ಥೆಯನ್ನು ಮಾಡಿಕೊಂಡು ಕೋವಿಡ್ ಮೊದಲ ಅಲೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದರು. ಆದರೆ ವಿಪರೀತ ಗಾಳಿ - ಮಳೆ ಬಿದ್ದ ಪರಿಣಾಮವಾಗಿ ಇಡೀ ದಾಳಿಂಬೆ ಬೆಳೆಯನ್ನೇ ನಾಶ ಮಾಡಲಾಗಿತ್ತು.
ಆ ಬಳಿಕ ಧೈರ್ಯಗೆಡದೆ ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ದಾಳಿಂಬೆ ಬೆಳೆಯನ್ನು ಬೆಳೆದಿದ್ದಾರೆ. ಈ ಕೋವಿಡ್ ಎರಡನೇ ಅಲೆಯಲ್ಲಿ ಭರ್ಜರಿ ಲಾಭ ಗಳಿಕೆ ಮಾಡುವಲ್ಲಿ ರೈತ ಮನ್ನೆ ಶ್ರೀಧರ ಯಶಸ್ಸು ಕಂಡಿದ್ದಾರೆ. ಅಂದಾಜು 15 ಎಕರೆಯಲ್ಲಿ ಬಿತ್ತನೆ ಮಾಡಲಾದ ಭಗುವಾ ತಳಿಯ ದಾಳಿಂಬೆ ಗಿಡಗಳು (5500), ಹನಿ ನೀರಾವರಿ, ಕೂಲಿಕಾರ್ಮಿಕರ ಖರ್ಚು-ವೆಚ್ಚ ಸೇರಿದಂತೆ ಸರಿ ಸುಮಾರು 40 ಲಕ್ಷ ರೂ.ಗಳನ್ನ ವ್ಯಯಿಸಿದ್ದಾರೆ.
ಈ ಬಾರಿ 75 ಟನ್ಗೂ ಅಧಿಕ ಇಳುವರಿ ದಾಳಿಂಬೆ ಬೆಳೆ ಬಂದಿದೆ. ಕೆಜಿಗೆ 107 ರೂ. ಎಂದು ದಾಳಿಂಬೆಗೆ ದರ ನಿಗದಿ ಮಾಡಿ ತಮಿಳುನಾಡು ಮೂಲದ ದಲ್ಲಾಳಿಗಳು ಖರೀದಿಸಿದ್ದು, ಅಂದಾಜು 80 ಲಕ್ಷಕ್ಕೂ ಅಧಿಕ ಆದಾಯ ಹರಿದುಬಂದಿದೆ.
ಶೇಡ್ ನೆಟ್ ಸಹಕಾರಿ: ಈ ದಾಳಿಂಬೆ ಬೆಳೆಗೆ ಶೇಡ್ ನೆಟ್ ಅಳವಡಿಸಿದ್ದು, ಸುಮಾರು 10 ಲಕ್ಷ ರೂ.ವರೆಗೂ ವ್ಯಯಿಸಲಾಗಿದೆ. ಹೀಗಾಗಿ, ಈ ದಾಳಿಂಬೆ ಬೆಳೆಯಲ್ಲಿ ಉತ್ತಮ ಇಳುವರಿ ಕಾಣಲು ಸಹಕಾರಿಯಾಯಿತೆಂದು ರೈತ ಮನ್ನೆ ಶ್ರೀಧರ್ ಹೇಳುತ್ತಾರೆ.