ಬಳ್ಳಾರಿ: ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಾದ ಬಳಿಕ ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಭವಿಷ್ಯ ನುಡಿದ್ದಾರೆ.
ಬಳ್ಳಾರಿಯ ಮೀನಾಕ್ಷಿ ವೃತ್ತದ ಬಳಿಯಿರುವ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದೇಶದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾಗಲಿವೆ. ಕೋಮುವಾದ ಹಾಗೂ ಧರ್ಮರಾಜಕಾರಣ ಹೆಸರಿನಡಿ ಅನಗತ್ಯ ಗಲಭೆ, ಗೊಂದಲ ಸೃಷ್ಠಿಸುವ ಶಕ್ತಿಗಳನ್ನ ಮಟ್ಟ ಹಾಕೋದೆ ಈ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳ ಉದ್ದೇಶ.
ಹಾಗಾಗಿ, ಲೋಕಸಭಾ ಚುನಾವಣೆ ಬಳಿಕ ದೊಡ್ಡಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಕಾದುನೋಡಿ. ಇದು ಚುನಾವಣಾ ಸಮಯ. ಆ ಕುರಿತು ನಾನೇನು ಹೆಚ್ಚಿಗೆ ಮಾತಾಡೋಲ್ಲ. ಚುನಾವಣೆ ನಂತರ ಧ್ರುವೀಕರಣದ ಮಾತುಗಳನ್ನ ಆಡುವೆ ಎಂದರು.
ದೇಶಪ್ರೇಮ ಹೆಸರಿನಡಿ ರಾಜಕೀಯ ಸಲ್ಲದು:
ಪ್ರಧಾನಿ ನರೇಂದ್ರ ಮೋದಿಯವರು ದೇಶಪ್ರೇಮ ಹೆಸರಿನಡಿ ರಾಜಕೀಯ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ಈ ದೇಶದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮವಿದೆ. ಅದನ್ನೇ ಬಂಡವಾಳವನ್ನಾಗಿಸಬಾರದು. ಬಿಜೆಪಿ ದೇಶಪ್ರೇಮವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಚಿರಪರಿಚಿತರು:
ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರು ನನಗೆ ಚಿರಪರಿಚಿತರು. ತುರ್ತು ಸಂದರ್ಭದಲ್ಲಿ ನಾನು ಮತ್ತು ಉಗ್ರಪ್ಪನವರು ಜೈಲಿನಲ್ಲಿ ಭೇಟಿಯಾಗಿದ್ದೇವೆ. ಅವರೊಬ್ಬ ಉತ್ತಮ ಸಂಸದೀಯ ಪಟು. ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ, ಅವರನ್ನ ಬಳ್ಳಾರಿಯ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳಿಸಿಕೊಡಬೇಕು.