ಬಳ್ಳಾರಿ: ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಬೆಂಗಳೂರಿನಲ್ಲಿ 4 ಕಡೆ ವಿದ್ಯುತ್ ಚಿತಗಾರ ಒದಗಿಸಲಾಗುತ್ತಿದ್ದು, ಅದೇ ರೀತಿ ಬಳ್ಳಾರಿಯಲ್ಲಿ ವಿದ್ಯುತ್ ಚಿತಗಾರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ಗುಗ್ಗರಹಟ್ಟಿ ಅಥವಾ ಅವಶ್ಯ ಇರುವ ಕಡೆ ಈ ವಿದ್ಯುತ್ ಚಿತಗಾರದ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಡಲಾಗುವುದು ಎಂದರು.
ಸೋಂಕು ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್: ಸೋಂಕು ಲಕ್ಷಣವಿಲ್ಲದ ರೋಗಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಹೋಮ್ ಕ್ವಾರಂಟೈನ್ ಮಾಡುವುದಕ್ಕಿಂತ ಮುಂಚೆ ನಮ್ಮ ತಂಡವು ಆ ಲಕ್ಷಣವಿಲ್ಲದ ರೋಗಿಯ ಮನೆಗೆ ತೆರಳಿ ಪರಿಶೀಲನೆ ನಡೆಸಲಿದೆ. ಮನೆಯಲ್ಲಿ ಸಮರ್ಪಕ ಸೌಕರ್ಯ ಇದ್ದಲ್ಲಿ ಮಾತ್ರ ಹೋಮ್ ಕ್ವಾರಂಟೈನ್ಗೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು ಎಂದರು.
ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಮ್ಸ್ನ ಅಪರೇಷನ್ ಥಿಯೇಟರ್ ಕೆಲಸವನ್ನು ಜಿಲ್ಲಾ ಖನಿಜ ನಿಧಿಯಡಿ 12 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
1 ಲಕ್ಷ ಆಂಟಿಜೆನ್ ಕಿಟ್ ಖರೀದಿಗೆ ಚಿಂತನೆ: ಜಿಲ್ಲೆಯಲ್ಲಿ 10,000 ಆಂಟಿಜೆನ್ ಕಿಟ್ ಖರೀದಿಸಿ ಕೋವಿಡ್ ತಪಾಸಣೆಗೆ ಒತ್ತು ನೀಡಿರುವುದು ಮಾದರಿಯಾಗಿದೆ. ಅದೇ ರೀತಿ ತಪಾಸಣೆಗೆ ಒತ್ತು ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು 1 ಲಕ್ಷ ಆಂಟಿಜೆನ್ ಕಿಟ್ ಖರೀದಿಸಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಕೋವಿಡ್‌ಗಾಗಿ ಪ್ರತಿ ವಾರ್ಡ್ಗೆ 2 ಆಂಬ್ಯುಲೆನ್ಸ್ಗಳಂತೆ 400 ಆಂಬ್ಯುಲೆನ್ಸ್ಗಳ್ನು ಖರೀದಿಸಿ ಮೀಸಲಿಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಐಪಿಎಸ್ ಅಧಿಕಾರಿ ಒಬ್ಬರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ 10,000 ಬೆಡ್ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಬಳ್ಳಾರಿಯಲ್ಲೂ 2 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಡಿಎಚ್‌ಓ ಡಾ. ಎಚ್.ಎಲ್. ಜನಾರ್ದನ ಸೇರಿದಂತೆ ಇತರರು ಇದ್ದರು.