ಹೊಸಪೇಟೆ(ವಿಜಯನಗರ): ಹೊಸಪೇಟೆಯ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ (NEKSRTC) ವಿಭಾಗವು ಕೋವಿಡ್ ಹೊಡೆತಕ್ಕೆ ನಲುಗಿ ಹೋಗಿದೆ. ಕೋವಿಡ್ ಮೊದಲನೇ ಅಲೆ, ಸಾರಿಗೆ ಮುಷ್ಕರ ಹಾಗೂ ಕೋವಿಡ್ ಎರಡನೇ ಅಲೆಯು ಸಂಸ್ಥೆಯನ್ನು ನಷ್ಟದ ಸುಳಿಯಲ್ಲಿ ಸಿಲುಕಿಸಿದೆ.
ಹೊಸಪೇಟೆ ವಿಭಾಗದ ವ್ಯಾಪ್ತಿಗೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು ಹಾಗೂ ಹೊಸಪೇಟೆ ಬರುತ್ತವೆ. ಇದರಲ್ಲಿ ಚಾಲಕ ಮತ್ತು ನಿರ್ವಾಹಕ, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 1,885 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಪೀಪರ್ (ನಾನ್ ಎಸಿ, ಎಸಿ), ಸುಹಾಸ, ರಾಜಹಂಸ, ಸಾಮಾನ್ಯ ಬಸ್ ಸೇರಿದಂತೆ ಒಟ್ಟು 498 ಬಸ್ಗಳು ಕಾರ್ಯನಿರ್ವಹಿಸುತ್ತಿವೆ.
ಕೋವಿಡ್ನಿಂದ ನಷ್ಟದ ಸುಳಿಗೆ:
ಕೋವಿಡ್ ಮೊದಲ ಅಲೆಗೆ 51.83 ಕೋಟಿ ರೂ., ಎರಡನೇಯ ಅಲೆಗೆ 24.15 ಕೋಟಿ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಕೋವಿಡ್ ಒಟ್ಟು 76 ಕೋಟಿ ರೂ. ಬೊಕ್ಕಸಕ್ಕೆ ನಷ್ಟವಾಗಿದೆ. ಇದು ಹೊಸಪೇಟೆ ವಿಭಾಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸಾರಿಗೆ ಮುಷ್ಕರದ ಪೆಟ್ಟು:
ವಿವಿಧ ಬೇಡಿಕೆಗಾಗಿ ಸಾರಿಗೆ ನೌಕರರು ಏ.7 ರಿಂದ 21 ರವರೆಗೆ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ 6.19 ಕೋಟಿ ರೂ. ನಷ್ಟ ಅನುಭವಿಸುವಂತಾಯಿತು. ಸಾರಿಗೆ ಸಂಸ್ಥೆಗೆ ಮೇಲಿಂದ ಮೇಲೆ ಪೆಟ್ಟುಗಳು ಬೀಳುತ್ತಿದ್ದು, ನಷ್ಟ ಹಾದಿಯನ್ನು ಹಿಡಿಯುವಂತಾಗಿದೆ.
ವೇತನದಲ್ಲಿ ಕಡಿತ:
ಹೊಸಪೇಟೆ ವಿಭಾಗದಲ್ಲಿ ಒಟ್ಟು 1,885 ಸಿಬ್ಬಂದಿ ಇದ್ದಾರೆ. ಈ ಪೈಕಿ 548 ಸಿಬ್ಬಂದಿ ಸಾರಿಗೆ ಮುಷ್ಕರ ಸೇರಿದಂತೆ ನಾನಾ ಕಾರಣಗಳಿಂದ ಗೈರು ಹಾಜರಿ ಹಾಕಿದ್ದರು. ಗೈರು ಹಾಜರಿಯನ್ನು ಹಾಕಿದರವರನ್ನು ಬಿಟ್ಟು ಉಳಿದ ಸಿಬ್ಬಂದಿಗೆ ಏಪ್ರಿಲ್ ತಿಂಗಳಿನ ಶೇ.70 ರಷ್ಟು ವೇತನವನ್ನು ನೀಡಲಾಗಿದೆ. ಮೇ ತಿಂಗಳಿನ ಪೂರ್ಣ ಪ್ರಮಾಣದ ವೇತನವನ್ನು ಪಾವತಿಸಲಾಗಿದೆ.
ಕೋವಿಡ್ ಲಸಿಕೆಗೆ ಒತ್ತು:
ಹೊಸಪೇಟೆ ವಿಭಾಗದ ಸಿಬ್ಬಂದಿಗೆ ಲಸಿಕೆ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ. 1885 ಸಿಬ್ಬಂದಿ ಪೈಕಿ ಈಗಾಗಲೇ 1680 ಜನರಿಗೆ ಮೊದಲನೇ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. 122 ಜನರಿಗೆ ಎರಡನೇ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ.
'ಕೋವಿಡ್ನಿಂದ ಸಾರಿಗೆ ವಿಭಾಗ ನಷ್ಟ ಅನುಭವಿಸುವಂತಾಗಿದೆ. ಎರಡೂ ಅಲೆಯಿಂದ ಬರೋಬ್ಬರಿ 76 ಕೋಟಿ ರೂ. ನಷ್ಟವಾಗಿದೆ.'
- ಜಿ.ಶೀನಯ್ಯ, ನಿಯಂತ್ರಣಾಧಿಕಾರಿ, ಹೊಸಪೇಟೆ ಸಾರಿಗೆ ವಿಭಾಗ
ಇದನ್ನೂ ಓದಿ: ಅನ್ಲಾಕ್ ಹೊಸ ಮಾರ್ಗಸೂಚಿ: ಯಾವ ಜಿಲ್ಲೆಯಲ್ಲಿ ಏನಿರುತ್ತೆ.. ಏನಿರಲ್ಲ..?