ಬಳ್ಳಾರಿ: ಜನಾಕರ್ಷಣೆ ತಾಣವಾಗಿ ಮಾರ್ಪಟ್ಟಿರುವ ಸಂಡೂರು ತಾಲೂಕಿನ ಗುಡ್ಡಗಾಡು ಪ್ರದೇಶದ ಸೊಬಗು ಈ ಮುಂಗಾರು ಹಂಗಾಮಿನ ನಂತರ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಹಸಿರನ್ನ ಹೊದ್ದು ನಿಂತಿರುವ ಸಂಡೂರು ತಾಲೂಕಿನ ಗುಡ್ಡಗಾಡು ಪ್ರದೇಶದ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತಿತ್ತು. ಆದರೀಗ ಕೊರೊನಾ ಭೀತಿಯಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದೆ. ಇಲ್ಲಿನ ನಾರಿಹಳ್ಳದಲ್ಲಿ ಮಾನಸ ಸರೋವರ ಸಿನಿಮಾದ ಚಿತ್ರೀಕರಣವೂ ನಡೆದಿತ್ತು. ಆಗಿನಿಂದಲೇ ಈ ಸ್ಥಳ ಜನಪ್ರಿಯಗೊಂಡಿತ್ತು.
ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೆದಿನೇ ಏರುತ್ತಿರುವ ಕಾರಣ, ನಾನಾ ಜಿಲ್ಲೆ ಹಾಗೂ ರಾಜ್ಯಗಳಿಂದ ನಾರಿಹಳ್ಳ ಹಾಗೂ ಕುಮಾರಸ್ವಾಮಿ ಬೆಟ್ಟದ ಸೌಂದರ್ಯದ ಸೊಬಗನ್ನು ಸವಿಯಲು ಪ್ರವಾಸಿಗರು ಅಂಜುತ್ತಿದ್ದಾರೆ.
ಕೇವಲ ಬೆರಳೆಣಿಕೆಯಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಭಾರಿ ಮತ್ತು ಲಘು ವಾಹನದಲ್ಲಿ ಸಂಚರಿಸುವವರು ನಾರಿಹಳ್ಳದ ಬಳಿ ವಾಹನಗಳಿಂದ ಕೆಳಗಿಳಿದು ಹಚ್ಚ-ಹಸಿರಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಮುಂದೆ ಸಾಗುತ್ತಾರೆ.