ವಿಜಯನಗರ : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೊಸಪೇಟೆ ನಗರಸಭೆ ಸದಸ್ಯರಿಗೆ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸ್ವಕ್ಷೇತ್ರದ ಜನಪ್ರತಿನಿಧಿಗಳ ಮನವೊಲಿಸಲು ಸಚಿವ ಆನಂದ್ ಸಿಂಗ್ ಭರ್ಜರಿ ಪ್ಲಾನ್ ಮಾಡಿದ್ದಾರೆ. ಹೊಸಪೇಟೆ ನಗರಸಭೆ ಸದಸ್ಯರಿಗೆ ₹1 ಲಕ್ಷ ನಗದು, 1 ಕೆ.ಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಬಾಕ್ಸ್ ಒಳಗೊಂಡ ಕಿಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಅಲ್ಲದೆ ಪಂಚಾಯಿತಿಯ ಎಲ್ಲಾ ಸದಸ್ಯರಿಗೆ ತಲಾ ₹27 ಸಾವಿರ ನಗದು, 500 ಗ್ರಾಂ ಬೆಳ್ಳಿ, ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ. ಸಚಿವರ ಬೆಂಬಲಿಗರು ಎಲ್ಲ ಸದಸ್ಯರಿಗೆ ಕೊಡುಗೆ ತಲುಪಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಸಚಿವರ ಈ ಗಿಫ್ಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗಿಫ್ಟ್ ಪಡೆದವರು ಒಪ್ಪಿಕೊಂಡರು.. ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಸಚಿವರಿಂದ ಉಡುಗೊರೆ ಪಡೆದಿರುವ ಬಗ್ಗೆ ದೃಢಪಡಿಸಿದ್ದಾರೆ. ಆದರೆ ಸಚಿವ ಆನಂದ್ ಸಿಂಗ್ ಅವರನ್ನು ಈ ಬಗ್ಗೆ ಸ್ಪಷ್ಟನೆ ಕೇಳಲು ಈಟಿವಿ ಭಾರತ ಪ್ರತಿನಿಧಿ ದೂರವಾಣಿ ಕರೆ ಮಾಡಿದಾಗ ಸಚಿವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಹೊಸಪೇಟೆ ನಗರಸಭೆಯಲ್ಲಿ 35 ಸದಸ್ಯರು, 5 ಜನ ನಾಮನಿರ್ದೇಶಿತ ಸದಸ್ಯರಿದ್ದಾರೆ. ಕಮಲಾಪುರ ಪಟ್ಟಣ ಪಂಚಾಯಿತಿ ಮತ್ತು ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿದ್ದಾರೆ. ಇವರೆಲ್ಲರಿಗೂ ಈ ಬಾರಿಯ ದೀಪಾವಳಿ ಧಮಾಕ ಸಿಕ್ಕಂತಾಗಿದೆ.
ಇದನ್ನೂ ಓದಿ : ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?