ಬಳ್ಳಾರಿ: ಜಿಲ್ಲೆಯಲ್ಲಿ ಲಾಕ್ಡೌನ್ ಪರಿಣಾಮದಿಂದಾಗಿ ಕಲ್ಲಂಗಡಿ ಹಣ್ಣಿನ ಮಾರಾಟ ಕಳೆಗುಂದಿದ್ದು, ಕಲ್ಲಂಗಡಿ ಹಣ್ಣಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ಅಸಂಘಟಿತ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಜ್ಯೂಸ್ ತಯಾರಿಕೆ ಉದ್ಯಮವೂ ಸಂಪೂರ್ಣವಾಗಿ ನೆಲಕಚ್ಚಿದೆ.
ಪ್ರತಿ ಬಾರಿ ಬೇಸಿಗೆ ಕಾಲ ಬಂದಾಗ ಪ್ರತಿದಿನ 12 ಸಾವಿರ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದ ಇವರ ಕಷ್ಟ ಈಗ ಹೇಳತೀರದಾಗಿದೆ. ಈಗ ಕನಿಷ್ಠ ಮೂರು ಸಾವಿರ ರೂಪಾಯಿ ಗಳಿಸುವುದು ಕೂಡಾ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀದಿ ಬದಿಯಲ್ಲಿ ತಳ್ಳುವ ಗಾಡಿಗಳಲ್ಲಿ ಹಣ್ಣನ್ನು ಕತ್ತರಿಸಿ, ಮಾರಾಟ ಮಾಡುವವರ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾರೂ ಕೂಡ ರಸ್ತೆಗೆ ಇಳಿಯದ ಕಾರಣ ವ್ಯಾಪಾರ, ವಹಿವಾಟು ಅಷ್ಟಕಷ್ಟೇ ಇದೆ. ಕೆಲವೊಮ್ಮೆ ಕಲ್ಲಂಗಡಿ ಹಣ್ಣುಗಳು ಕೊಳೆತುಹೋದ ಉದಾಹರಣೆಗಳು ಇದಾವೆ.
ಈ ಸಂಬಂಧ ಈಟಿವಿ ಭಾರತ್ನೊಂದಿಗೆ ಕಲ್ಲಂಗಡಿ ಮಾರಾಟಗಾರ ಸಾದಿಕ್ ಅವರು ಮಾತನಾಡಿ ''ಕಲ್ಲಂಗಡಿ ಮಾರಾಟ ಸಂಪೂರ್ಣ ಕುಸಿದಿದೆ. ನೆರೆಹೊರೆಯ ರಾಜ್ಯಗಳಲ್ಲಿ ಕಲ್ಲಂಗಡಿ ಹಣ್ಣಿನ ದಾಸ್ತಾನು ಯಥೇಚ್ಛವಾಗಿ ಇದೆಯಾದ್ರೂ, ಕಲ್ಲಂಗಡಿ ಹಣ್ಣು ತಿನ್ನೋರೇ ಕಮ್ಮಿಯಾಗಿದ್ದಾರೆ. ಒಮ್ಮೊಮ್ಮೆ ಕಲ್ಲಂಗಡಿ ಅಂಗಡಿಗಳತ್ತ ಸಾರ್ವಜನಿಕರು ಭೇಟಿ ಕೊಡುತ್ತಾರೆ. ಈ ಹಿಂದೆ ಒಂದು ಕೆ.ಜಿ ಕಲ್ಲಂಗಡಿಗೆ 25ರಿಂದ 30 ರೂಪಾಯಿ ಇತ್ತು. ಆದರೆ ಈಗ 10 ರಿಂದ 15 ರೂಪಾಯಿಗೂ ಕಲ್ಲಂಗಡಿ ಮಾರಾಟ ಆಗೋದು ಕಷ್ಟ ಎಂದು ಅಳಲು ತೋಡಿಕೊಂಡಿದ್ದಾರೆ.