ಬಳ್ಳಾರಿ: ಹುಳಿಯಾರು ಪಟ್ಟಣದ ಕನಕವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.
ಗಡಗಿ ಚನ್ನಪ್ಪ ವೃತ್ತದ ಬಳಿ ಎಂ. ಜಿ. ಕನಕ ನೇತೃತ್ವದಲ್ಲಿ ಹತ್ತಾರು ಕುರುಬ ಸಮುದಾಯದ ಯುವಕರು ಜಮಾಯಿಸಿ ಕೆಲಕಾಲ ಸಚಿವರ ವಿರುದ್ಧ ಘೋಷಣೆ ಕೂಗಿದ್ರು. ಸಾರ್ವಜನಿಕ ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ ಇಂಥ ದುವರ್ತನೆ ತೋರಬಾರದಿತ್ತು. ಶಾಂತಿಸಭೆಯಲ್ಲಿ ಸಚಿವರು ತೋರಿದ ಈ ಉದ್ಧಟತನದ ವರ್ತನೆಯನ್ನು ಕುರುಬ ಸಮುದಾಯವು ತೀವ್ರವಾಗಿ ಖಂಡಿಸುತ್ತದೆ ಎಂದರು.
ಕೂಡಲೇ ಸಚಿವರು ಈಶ್ವರಾನಂದಪುರಿ ಸ್ವಾಮೀಜಿ ಬಳಿ ಹೋಗಿ ಬಹಿರಂಗವಾಗಿಯೇ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ಕುರುಬ ಸಮುದಾಯದ ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಕುರುಬ ಸಮುದಾಯದ ಯುವ ಮುಖಂಡರಾದ ಕೆ.ನಾಗರಾಜ ಬಂಡಿಹಟ್ಟಿ, ಗುಗ್ಗರಹಟ್ಟಿ ಶ್ರೀಕಾಂತ, ಅಮರಾಪುರ ಮಂಜುನಾಥ, ಕೋರ್ಟ್ ಮೋಹನ, ಕೊಳಗಲ್ಲು ವಿನಯ ಕುಮಾರ, ಕಕ್ಕಬೇವಿನಹಳ್ಳಿ ಹೊನ್ನಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.