ವಿಜಯನಗರ : ಹುಬ್ಬಳ್ಳಿಯಲ್ಲಿ ನಿನ್ನೆ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಆಗಿದೆ. ಕೆಲವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೊಸಪೇಟೆಯಲ್ಲಿ ಹೇಳಿದರು. ವಿಜಯನಗರದ ಹೊಸಪೇಟೆಯಲ್ಲಿ ಆಯೋಜಿಸಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೂ ಮುನ್ನ ಸಿಎಂ ಬೊಮ್ಮಾಯಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಚೋದನಾಕಾರಿ ಪೋಸ್ಟ್ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಈ ರೀತಿಯ ಸಂಘಟನೆಗಳನ್ನ ಬಿಡೋದಿಲ್ಲ. ಇದನ್ನ ಕರ್ನಾಟಕ ರಾಜ್ಯ ಸಹಿಸೋದಿಲ್ಲ. ಇದಕ್ಕೆ ಮತ್ತೆ ಬೇರೆ ರೀತಿಯ ರಾಜಕೀಯ ಬಣ್ಣ ಬಳಿಯೋದು ಬೇಡ. ಯಾರೇ ಘಟನೆಯಲ್ಲಿ ಭಾಗಿಯಾಗಿದ್ರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಕಾನೂನು ಕೈಗೆತ್ತಿಕೊಳ್ಳುವವರನ್ನು ಬಿಡುವ ಮಾತೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ಅಪರಾಧಿಗಳನ್ನು ಬಂಧಿಸಿ ಸರ್ಕಾರ ಸೂಕ್ತ ಕ್ರಮಗೊಳ್ಳಲಿ : ಹುಬ್ಬಳ್ಳಿ ಗಲಾಟೆ ಮತ್ತು ಪೋಸ್ಟ್ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪೋಸ್ಟ್ ಮಾಡಿದವರು ಯಾರಿದ್ದಾರೋ, ಅವರ ಬಂಧನ ಆಗಿದೆ. ಅಪರಾಧಿಗಳನ್ನು ಬಂಧಿಸಿ ಸರ್ಕಾರ ಸೂಕ್ತ ಕ್ರಮಗೊಳ್ಳಲಿ. ಹಿಂದೂ-ಮುಸ್ಲಿಂ ಸಾಮರಸ್ಯ ಇರುವ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿರೋದು ನೋವು ತರಿಸಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
ಯಾರು ಮುಖ್ಯಮಂತ್ರಿ ಆಗಿರ್ತಾರೆ ಅನ್ನೋದು ಮುಖ್ಯ ಅಲ್ಲ. ಕೆಲವು ಸಂದರ್ಭಗಳಲ್ಲಿ ಕೆಲವು ಘಟನೆಗಳು ಆಗುತ್ತವೆ. ಅವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.