ಬಳ್ಳಾರಿ: ರೈತ ವಿರೋಧಿ ಸುಗ್ರಿವಾಜ್ಞೆಗಳನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸರ್ಕಾರ ರೈತ ವಿರೋಧಿ ಕಾಯ್ದೆ ಕೈ ಬಿಡಬೇಕು. ಕಾರ್ಪೂರೇಟ್ ಸಂಸ್ಥೆಗಳಿಂದ ಅನ್ನದಾತನ ರಕ್ಷಿಸಿ, ಭೂ ಸುಧಾರಣಾ ಹೆಸರಿನಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಜೀತದಾಳುಗಳಾಗಿ ಮಾಡುವ ಸುಗ್ರೀವಾಜ್ಞೆ ವಾಪಸ್ ಪಡೆಯಬೇಕು ಎಂದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಇದೇ 25ರಂದು ಭಾರತ್ ಬಂದ್ಗೆ ಕರೆ ನೀಡಿರುವ ಹಿನ್ನೆಲೆ, ಇಂದು ಸಾಂಕೇತವಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.