ಬಳ್ಳಾರಿ: ರಾಜಧಾನಿ ಬೆಂಗಳೂರು ನಂತರ ಬಳ್ಳಾರಿಯಲ್ಲಿ ಭೂಮಿಗೆ ಬಹುಬೇಡಿಕೆಯಿದೆ. ಅದರಿಂದ ಬಡ ಹಾಗೂ ಮಧ್ಯಮವರ್ಗದವರಿಗೆ ಇಲ್ಲಿ ಭೂಮಿಕೊಳ್ಳುವುದು ಕನಸಿನ ಮಾತಾಗಿತ್ತು. ಆದರೆ, ಈ ದುಬಾರಿ ಬೆಲೆಯನ್ನು ಹೋಗಲಾಡಿಸಲು ಕರ್ನಾಟಕ ಗೃಹ ಮಂಡಳಿ ಮುಂದಾಗಿದೆ.
ಹೌದು, ಕರ್ನಾಟಕ ಗೃಹ ಮಂಡಳಿಯ ಖಾಲಿಯಿರುವ ನಿವೇಶನಗಳಲ್ಲಿ ವಸತಿ ಬಡಾವಣೆ ನಿರ್ಮಿಸುವ ಮುಖೇನ ಅತ್ಯಂತ ಅಗ್ಗದ ದರದಲ್ಲಿ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವಿತರಿಸಲು ಮುಂದಾಗಿರೋದು ವಿಶೇಷವೇ ಸರಿ. ಅದರಲ್ಲೂ ಗಣಿನಗರಿಯಲ್ಲಿ ನಿವೇಶನ ಖರೀದಿಸಬೇಕೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನೆಲೆಸಿರುವ ಮಧ್ಯಮ ಹಾಗೂ ಬಡ ವರ್ಗದವರಿಗೆ ನಿವೇಶನ ಖರೀದಿಸಬೇಕು ಎಂದ್ರೆ ಆಕಾಶವೇ ಮೇಲೆ ಬಿದ್ದಂತೆ ಭಾಸವಾಗುತ್ತದೆ. ಅಂಥವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವಲ್ಲಿ ಕರ್ನಾಟಕ ಗೃಹ ಮಂಡಳಿ ಯಶಸ್ವಿಯಾಗಿದೆ.
ಸೆಪ್ಟೆಂಬರ್ 4 ಮತ್ತು 5 ರಂದು ಇಲ್ಲಿನ ಸತ್ಯನಾರಾಯಣ ಪೇಟೆಯಲ್ಲಿರುವ ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಧ್ಯಮ ಹಾಗೂ ಬಡ ವರ್ಗದವರ ಕನಸಿನ ಮನೆ ಅಥವಾ ನಿವೇಶನ ಕಲ್ಪಿಸಿಕೊಡುವ ಕಾರ್ಯದಲ್ಲಿ ತೊಡಗಿಕೊಂಡಿರೋದು ವಿಶೇಷ ಎನಿಸಿತ್ತು.
ಬಳ್ಳಾರಿ ನಗರ ಹೊರವರ್ತುಲದ ಗೋನಾಳು ರಸ್ತೆಯ ಅಂದ್ರಾಳ್ ಬೈಪಾಸ್ ಹಾಗೂ ಬೆಂಗಳೂರು - ಹೊಸಪೇಟೆ ರಸ್ತೆಯಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕರ್ನಾಟಕ ಗೃಹ ಮಂಡಳಿ ಸುಸಜ್ಜಿತ ಕಾಂಪೌಂಡ್ ಹಾಗೂ ಬಡಾವಣೆಗಳನ್ನು ನಿರ್ಮಿಸಿದ್ದು, ಈ ಎರಡು ದಿನಗಳ ಕಾಲ ನಡೆದ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ನೂರಾರು ಮಂದಿ ನಿವೇಶನ, ಮನೆಗಳ ಖರೀದಿಯಲ್ಲಿ ತೊಡಗಿದ್ದಾರೆ.
ಈ ಪ್ರಾಪರ್ಟಿ ಎಕ್ಸ್ ಪೋ ಮೇಳದಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗಿದೆ. ಮುಂಗಡವಾಗಿ ಕರ್ನಾಟಕ ಗೃಹ ಮಂಡಳಿ ಆಯುಕ್ತರ ಹೆಸರಿನಡಿ ಅಂದಾಜು ₹50,000 ಡಿಮ್ಯಾಂಡ್ ಡ್ರಾಫ್ಟ್ ಅನ್ನು ಸಲ್ಲಿಸಿ, ತಮಗಿಷ್ಟವಾದ ನಿವೇಶನ ಅಥವಾ ಮನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದಲ್ಲದೇ, ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಅಂದಾಜು 3 ಎಕರೆಯಲ್ಲಿ 60* 40 ಅನುಪಾತದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಅಲ್ಲೀಪುರ ಬಳಿಯ ಬಿಐಟಿಎಂ ಕಾಲೇಜು ಎದುರುಗಡೆ ಅಂದಾಜು 132 ಎಕರೆಯಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದೆ. ಈಗಾಗಲೇ 1608 ಅರ್ಜಿದಾರರು ಮುಂಗಡ ಹಣ ಪಾವತಿಸಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಉಭಯ ವಸತಿ ಬಡಾವಣೆಗಳಲ್ಲಿನ ನಿವೇಶನ ಅಥವಾ ಮನೆಗಳನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಈ ರೀತಿಯ ಎಕ್ಸ್ ಪೋ ಮೇಳವನ್ನು ಆಯೋಜಿಸುವ ಮುಖೇನ ಹಂಚಿಕೆ ಮಾಡಲಾಗುವುದು ಗೃಹಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ತಿಳಿಸಿದ್ದಾರೆ.