ವಿಜಯನಗರ: ಸಚಿವ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆ ವಿಜಯನಗರದ ಉಸ್ತುವಾರಿ ನೀಡಿ ಹೊರಡಿಸಲಾಗಿದ್ದ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ರದ್ದು ಮಾಡಿದ್ದಾರೆ. ನಿನ್ನೆ ನಡೆದ ಬೆಳವಣಿಗೆಯಿಂದ ಅವರಿಗೆ ರಾಜಕೀಯವಾಗಿ ಹಿನ್ನೆಡೆಯಾಗುತ್ತಿದೆಯಾ ಎನ್ನುವ ಅನುಮಾನವೀಗ ಹುಟ್ಟಿಕೊಂಡಿದೆ.
ಆನಂದ್ ಸಿಂಗ್ ಅವರು ನೂತನ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತದಲ್ಲಿಯೇ ಅತ್ಯಂತ ಎತ್ತರದ ಧ್ವಜ ಸ್ತಂಭವನ್ನು ನಿರ್ಮಾಣ ಮಾಡಿಸುತ್ತಿದ್ದಾರೆ. ಸಹಜವಾಗಿ ಆ ಧ್ವಜಸ್ತಂಭದ ಮೊದಲನೇ ಧ್ವಜಾರೋಹಣವನ್ನು ತಾವೇ ಮಾಡಬೇಕು ಎಂದು ಕೈತಪ್ಪಿ ಹೋಗಿದ್ದ ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಸಿಎಂ ಬೊಮ್ಮಾಯಿ ಅವರಿಂದ ಮರಳಿ ಪಡೆದಿದ್ರು. ಇದರ ಕುರಿತು ಶನಿವಾರ ಬೆಳಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಆನಂದ್ ಸಿಂಗ್ ಅವರಿಗೆ ವಿಜಯನಗರ ಜಿಲ್ಲೆ, ಕೊಪ್ಪಳ ಜಿಲ್ಲೆಗೆ ಶಶಿಕಲಾ ಜೊಲ್ಲೆ ಅವರನ್ನು ಉಸ್ತುವಾರಿಯಾಗಿ ನೇಮಿಸಿ ಸರ್ಕಾರ ಆದೇಶ ಮಾಡಿತ್ತು.
ಆದರೆ ಸಂಜೆ ವೇಳೆಗೆ ಎಲ್ಲವೂ ಬದಲಾಗಿತ್ತು. ಮತ್ತೆ ಆನಂದ್ ಸಿಂಗ್ ಅವರಿಗೆ ಕೊಪ್ಪಳ, ಶಶಿಕಲಾ ಜೊಲ್ಲೆ ಅವರಿಗೆ ವಿಜಯನಗರ ಜಿಲ್ಲೆ ಜವಾಬ್ದಾರಿಯನ್ನು ನೀಡಲಾಗಿದೆ. ಈ ಬೆಳವಣಿಗೆ ಸಹಜವಾಗಿಯೇ ಸಚಿವ ಆನಂದ್ ಸಿಂಗ್ ಅವರಿಗೆ ಅಸಮಾಧಾನ ತರಿಸಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ. ಶ್ರೀರಾಮುಲು, ಆನಂದ್ ಸಿಂಗ್ ಅವರಿಗೆ ಇದರಿಂದ ಯಾವುದೇ ಅಸಮಾಧಾನ ಆಗಿಲ್ಲ. ಇದು ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ಹೊರಡಿಸಿದ್ದ ಆದೇಶ ಸಂಜೆ ವೇಳೆಗೆ ರದ್ದು.. ಸಚಿವ ಆನಂದ್ ಸಿಂಗ್ಗೆ ಶಾಕ್ ನೀಡಿದ ಸಿಎಂ
ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಗೋದರಲ್ಲಿ ಆನಂದ್ ಸಿಂಗ್ ಅವರ ಪಾತ್ರ ಮಹತ್ವದ್ದು. ಅವರೇ ಮೊದಲಿಗರಾಗಿ ರಾಜೀನಾಮೆ ನೀಡಿದ್ರು. ನಂತರ ನಡೆದ ಉಪಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಿಂದಲೇ ಬಿಜೆಪಿಯಿಂದ ಸ್ಫರ್ಧೆ ಮಾಡಿ ಗೆದ್ದು, ಅರಣ್ಯ ಪರಿಸರ ಖಾತೆ ಸಚಿವರಾದರು. ಬಿಎಸ್ವೈ ಅವರ ರಾಜೀನಾಮೆಯಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಪಡೆಯಲು ಶತಾಯಗತಾಯ ಪ್ರಯತ್ನ ಪಟ್ಟರು. ಬಿಎಸ್ವೈ ಅವರಿಂದಲೂ ಹೇಳಿಸಿದ್ದಾಯಿತು. ಆದ್ರೆ ಅವರಿಗೆ ಸಿಕ್ಕಿದ್ದು ಪ್ರವಾಸೋದ್ಯಮ ಇಲಾಖೆ. ಆಗಿನಿಂದಲೂ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ಇದ್ದೇ ಇದೆ. ಇನ್ನು ಶನಿವಾರದ ಬೆಳವಣಿಗೆಯಿಂದ ಆನಂದ್ ಸಿಂಗದ ಅವರಿಗೆ ಬಿಜೆಪಿಯ ವರಿಷ್ಠರು, ವ್ಯಕ್ತಿಗಿಂತ ಪಕ್ಷ ಹಾಗೂ ಅದರ ನಿರ್ಧಾರವೇ ಅಂತಿಮ ಎನ್ನುವ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.