ವಿಜಯನಗರ: ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಮಾನವತೆಗಾಗಿ ಯೋಗ ಎಂಬ ಧ್ಯೇಯ ವಾಕ್ಯದಡಿ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯ ಬಸವಣ್ಣ ಮಂಟಪದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜೂ.21ರಂದು ಬೆಳಗ್ಗೆ 5:30ರಿಂದ 7:45ರವರೆಗೆ 08ನೇ ಯೋಗ ದಿನಾಚರಣೆ ಕಾರ್ಯಕ್ರಮ ನಿಗದಿಯಾಗಿದ್ದು, ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಭಾರತದಾದ್ಯಂತ ಇರುವ 75 ಐತಿಹಾಸಿಕ/ಪಾರಂಪಾರಿಕ ಸ್ಥಳಗಳನ್ನು ಕೇಂದ್ರ ಆಯುಷ್ ಮಂತ್ರಾಲಯ ಗುರುತಿಸಿದ್ದು, ಇವುಗಳಲ್ಲಿ ಹಂಪಿ ಕೂಡ ಒಂದಾಗಿದೆ. ಇಲ್ಲಿ ನಡೆಯುವ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಚಿವರಾದ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಸಾಹೇಬ ಜೊಲ್ಲೆ, ಸಚಿವ ಆನಂದ್ ಸಿಂಗ್, ಕನ್ನಡದ ನಟ ಅಜಯರಾವ್, ಪದ್ಮಶ್ರೀ ಮಂಜಮ್ಮ ಜೋಗತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹಂಪಿ ಯೋಗ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ನಾಳೆ ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 6:40ರವರೆಗೆ ಯೋಗ ಸಂಬಂಧಿತ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6:40ರಿಂದ 7 ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಅರಮನೆ ಎದುರುಗಡೆಯಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಲಿರುವ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು,ಪತಂಜಲಿ,ಆರ್ಟ್ ಆಫ್ ಲಿವಿಂಗ್, ಬ್ರಹ್ಮಕುಮಾರಿ ಸಂಸ್ಥೆ, ಹಾಸ್ಟೆಲ್ ವಿದ್ಯಾರ್ಥಿಗಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಪ್ರತಿ ತಾಲೂಕಿನಿಂದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಖಾಸಗಿ ಬಸ್‍ಗಳು ಹೊರತುಪಡಿಸಿ 60ಕ್ಕೂ ಹೆಚ್ಚುವರಿ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.
ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಲಘು ಉಪಾಹಾರ ಮತ್ತು ನೀರಿನ ವ್ಯವಸ್ಥೆ, ಯೋಗಾಸನಕ್ಕೆ ಗ್ರೀನ್ ಮ್ಯಾಟ್ ವ್ಯವಸ್ಥೆ,ವೇದಿಕೆ,ಧ್ವನಿವರ್ಧಕ ವ್ಯವಸ್ಥೆ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಗತ್ಯ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೊಮ್ಮಘಟ್ಟದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಮೋದಿ