ಬಳ್ಳಾರಿ: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತವು ಆಂತರಿಕ ವಿಚಾರ ಹಾಗೂ ಕಚ್ಚಾಟವಾಗಿದೆ. ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಬಳ್ಳಾರಿ ನಗರದ ಡಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗರ ಆಂತರಿಕ ಕಚ್ಚಾಟಕ್ಕೂ ನಮಗೂ ಸಂಬಂಧವಿಲ್ಲ. ಅವರವರು ಭಿನ್ನಾಭಿಪ್ರಾಯ ಮಾಡಿಕೊಂಡು ಹೊಡೆದಾಡಿಕೊಂಡು ಈ ಸರ್ಕಾರ ಬೀಳಿಸಲು ಕಾರಣರಾದ್ರೆ, ಅದಕ್ಕೆ ನಾವೇನು ಮಾಡಬೇಕು?. ಹಾಗೊಂದು ವೇಳೆ ಈ ಸರ್ಕಾರ ಪತನವಾದ್ರೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದರು.
ಬಿಜೆಪಿ ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಅಂತ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ನಾವೇನು ಸರ್ಕಾರ ಬೀಳಿಸಲ್ಲ, ಅದರ ಪ್ರಯತ್ನಕ್ಕೂ ಕೈ ಹಾಕಲ್ಲ. ರಮೇಶ ಜಾರಕಿಹೊಳಿಯವರ ಗಾಳಿ ಮಾತಿಗೆ ನಾವ್ಯಾರೂ ಕಿವಿಗೊಡಲ್ಲ ಎಂದು ಖಂಡ್ರೆ ಹೇಳಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿಸಿಸಿ) ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಬಳ್ಳಾರಿ ಲೋಕಸಭಾ ಮಾಜಿ ಸದಸ್ಯ ವಿ.ಎಸ್.ಉಗ್ರಪ್ಪ ಸೇರಿದಂತೆ ಇತರರಿದ್ದರು.