ವಿಜಯನಗರ: ಐತಿಹಾಸಿಕ ಹಂಪಿ, ಕಡ್ಡಿರಾಂಪುರ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ 16 ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ ಬೀಗ ಹಾಕಿದೆ.
ಸರ್ಕಾರದ ಅನುಮತಿಯಿಲ್ಲದೇ ಕೃಷಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದ 16 ಹೋಂ ಸ್ಟೇ, ರೆಸಾರ್ಟ್‌ಗಳಿಗೆ ಪ್ರಾಧಿಕಾರ ಈಗಾಗಲೇ ನೋಟಿಸ್ ಜಾರಿ ಮಾಡಿತ್ತು. ಆದರೆ, ನೋಟಿಸ್‌ಗೆ ಜಗ್ಗದ ಮಾಲೀಕರು ರೆಸಾರ್ಟ್ ಆರಂಭಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರ ಹಂಪಿ ಮತ್ತು ಕಡ್ಡಿರಾಂಪುರ ರೆಸಾರ್ಟ್‌ಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದೀಗ ಬೀಗ ಜಡಿದಿದೆ.
ಈ ಹಿಂದೆ, ಕಿಷ್ಕಿಂದೆ ಮತ್ತು ಅಂಜನಾದ್ರಿಯ ಬಳಿ ಅಕ್ರಮವಾಗಿ ನಿರ್ಮಿಸಿದ್ದ 49 ಹೋಟೆಲ್‌ಗಳನ್ನು ಪ್ರಾಧಿಕಾರ ತೆರವುಗೊಳಿಸಿತ್ತು. ಆದರೆ, ಹಂಪಿ ಸುತ್ತಮುತ್ತಲಿನ ರೆಸಾರ್ಟ್‌ಗಳು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದ್ದವು. ಹೀಗಾಗಿ, ಪ್ರಾಧಿಕಾರ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಅಂಜನಾದ್ರಿ, ಕಿಷ್ಕಂದೆಯ ರೆಸಾರ್ಟ್/ಹೋಟೆಲ್ ಮಾಲೀಕರು ಆರೋಪಿಸಿದ್ದರು.
ಇದೇ ಸಮಯದಲ್ಲಿ ಪ್ರಾಧಿಕಾರ ಹಂಪಿ ಸುತ್ತಮುತ್ತಲಿನ ರೆಸಾರ್ಟ್‌ಗಳಿಗೆ ನೋಟಿಸ್ ನೀಡಿ, ಎಲ್ಲ ರೆಸಾರ್ಟ್‌ಗಳನ್ನು ಮುಚ್ಚಿಸಿದೆ. ಹಂಪಿ ಸ್ಮಾರಕಗಳಿಗೆ ಹೊಂದಿಕೊಂಡಂತೆ ಈ ರೆಸಾರ್ಟ್‌ಗಳಿದ್ದರಿಂದ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಿದ್ದರು. ಪ್ರವಾಸಿಗರಿಂದ ಹೆಚ್ಚಿನ ಆದಾಯ ಸಹ ಗಳಿಸುತ್ತಿದ್ದರು. ಪ್ರಾಧಿಕಾರದ ಇಂದಿನ ಕ್ರಮದಿಂದ ರೆಸಾರ್ಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಸೋದ್ಯಮ ಬೆಳೆಯಬೇಕೆಂದರೆ ಪ್ರವಾಸಿಗರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಿಕೊಡಬೇಕು. ಆ ಕೆಲಸ ಪ್ರಾಧಿಕಾರ ಮಾಡಿಲ್ಲ. ಸರ್ಕಾರಕ್ಕೆ ಸೇರಿದ ಒಂದೆರಡು ಹೋಟೆಲ್‌ಗಳಿವೆ. ವಾರಾಂತ್ಯಕ್ಕೆ ಸಾವಿರಾರು ಜನ ಹಂಪಿ, ಅಂಜನಾದ್ರಿಗೆ ಬಂದು ಹೋಗುತ್ತಾರೆ. ಎಲ್ಲ ರೆಸಾರ್ಟ್‌ಗಳು ಭರ್ತಿಯಾಗುತ್ತಿದ್ದವು. ಈಗ ಎಲ್ಲ ರೆಸಾರ್ಟ್ ಮುಚ್ಚಿಸಿದರೆ ಪ್ರವಾಸಿಗರು ಎಲ್ಲಿ ಉಳಿದುಕೊಳ್ಳುತ್ತಾರೆ?, ನಿಯಮ ಸಡಿಲಿಸಿ ರೆಸಾರ್ಟ್, ಹೋಂ ಸ್ಟೇ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಹೋಂ ಸ್ಟೇ ಮಾಲೀಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಳೆಗೆ ಪ್ರಾರ್ಥಿಸಿ ಕತ್ತೆಗಳ ಮದುವೆ: ಕೆಲವೇ ನಿಮಿಷಗಳಲ್ಲಿ ತುಂತುರು ಮಳೆ