ಬಳ್ಳಾರಿ: ನಗರದ ರೇಡಿಯೋ ಪಾರ್ಕ್ ಬಳಿ ಆಟೋವೊಂದರಲ್ಲಿ ಅನ್ನ ಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಎಕ್ಸ್ಕ್ಲ್ಯೂಸಿವ್ ದೃಶ್ಯ ಈಟಿವಿ ಭಾರತಕ್ಕೆ ಸಿಕ್ಕಿದೆ.
ಮಹಿಳೆವೋರ್ವಳು ರೇಡಿಯೋ ಪಾರ್ಕ್ ಬಳಿಯ ಮನೆಗಳು ಮತ್ತು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಅಕ್ಕಿ ಖರೀದಿಸಿದ್ದಲ್ಲದೆ, ಈ ಅಕ್ಕಿಯನ್ನು ಹೋಟೆಲ್ಗಳಿಗೆ ಹೆಚ್ಚಿನ ಹಣಕ್ಕೆ ಮಾರುತ್ತಿರುವುದು ಬೆಳಕಿಗೆ ಬಂದಿದೆ.
ನಗರದ ವಾಸವಿ ಶಾಲೆಯ ಹತ್ತಿರ ಈ ಮಹಿಳೆಯ ಮನೆ ಇದೆ. ಪ್ರತಿನಿತ್ಯ ಸರ್ಕಾರ ಜನರಿಗೆ ನೀಡುವ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸುತ್ತಾರಂತೆ. ಒಂದು ಕೆ.ಜಿಗೆ 10 ರೂಪಾಯಿಯಂತೆ ಮನೆಮನೆಗೆ ಹೋಗಿ ಖರೀದಿಸುತ್ತಾರೆ. ನಾಗಲಕೆರೆ, ರಾಮನಗರ, ಸಿದ್ಧಾರ್ಥ ನಗರ, ಅಂತೋನಿ ಸಿಟಿ, ರೇಡಿಯೋ ಪಾರ್ಕ್ ಪ್ರದೇಶಗಳಲ್ಲಿನ ಮನೆಗಳು ಮತ್ತು ನ್ಯಾಯಬೆಲೆ ಅಂಗಡಿಯಲ್ಲಿಯೂ ಈ ಮಹಿಳೆ ಅಕ್ಕಿ ಖರೀದಿಸುತ್ತಾರೆ. ಬಳಿಕ ಪ್ರತಿ ಕೆ ಜಿ ಅಕ್ಕಿಯನ್ನು 40 ರಿಂದ 50 ರೂಪಾಯಿಗೆ ಮಾರಾಟ ಮಾಡ್ತಾರೆ ಎಂಬ ಮಾಹಿತಿ ಸ್ಥಳೀಯರಿಂದ ಸಿಕ್ಕಿದೆ.
ಒಟ್ಟಾರೆ ಸರ್ಕಾರ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅನ್ಯರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.