ಬಳ್ಳಾರಿ: ನನಗೆ ಇಂತಹದ್ದೇ ಖಾತೆ ಬೇಕು ಅಂತ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿರುವೆ, ಅವರು ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ ಎಂದು ಸಚಿವ ಆನಂದಸಿಂಗ್ ಹೇಳಿದರು.
ನಗರದ ಅದಿದೇವತೆ ಕನಕದುರ್ಗಮ್ಮ ದೇಗುಲಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಇಷ್ಟವಾದ ಖಾತೆ ನೀಡಬೇಕೆಂದು ಈಗಾಗಲೇ ಸಿಎಂ ಬೊಮ್ಮಾಯಿ ಅವರ ಬಳಿ ಕೋರಿರುವೆ. ಕೊಡೋದು ಬಿಡೋದು ಅವರಿಗೆ ಬಿಟ್ಟಿದ್ದು. ಅವರು ಯಾವ ಖಾತೆಯನ್ನಾದರೂ ನೀಡಲಿ ಅದನ್ನ ಸಮರ್ಥವಾಗಿ ನಿಭಾಯಿಸುವೆ. ನನಗಿಷ್ಟವಾದ ಖಾತೆಯನ್ನ ನೀಡಿದ್ರೆ ಮತ್ತಷ್ಟು ಪ್ರಬಲವಾಗಿ ನಿಭಾಯಿಸುವೆ ಎಂದು ಸಚಿವ ಆನಂದಸಿಂಗ್ ತಿಳಿಸಿದರು.
ಸದ್ಯದ ಮಟ್ಟಿಗೆ ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣೆಗೋಸ್ಕರ ಕೆಲ ಸಚಿವರಿಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ನನಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಗೋದು ಬಹುತೇಕ ಖಚಿತವಾಗಿದೆ ಎಂದು ಸಚಿವರು ತಿಳಿಸಿದರು.