ಹೊಸಪೇಟೆ : ತಾಲೂಕಿನ ನಾನಾ ಕಡೆ ಕಬ್ಬು ಕಟಾವು ಮಾಡಲು 100ಕ್ಕಿಂತ ಹೆಚ್ಚು ಕುಟುಂಬಗಳು ಕೆಲಸ ಅರಸಿ ಬಂದಿವೆ. ಬಯಲಿನಲ್ಲಿ ಟೆಂಟ್ ಹಾಕಿಕೊಂಡು ಸಂಸಾರ ದೋಣಿ ಸಾಗಿಸುವ ಜತೆಗೆ ಕಬ್ಬು ಕಟಾವು ಮಾಡುವ ಕಾಯಕದಲ್ಲಿ ಕುಟುಂಬಗಳು ನಿರತವಾಗಿವೆ.
ನಗರದ ಚಿತ್ತವಾಡ್ಗಿ, ತಾಲೂಕಿನ ಹೊಸೂರು ಹಾಗೂ ಕಮಲಾಪುರ ಭಾಗಗಳಲ್ಲಿ ನೂರಕ್ಕಿಂತ ಹೆಚ್ಚು ಕುಟುಂಬಗಳು ಕಬ್ಬು ಕಟಾವು ಮಾಡಲು ಕೆಲಸ ಅರಸಿ ಬಂದಿವೆ. ಇವರಿಗೆಲ್ಲ ಇದನ್ನ ಬಿಟ್ಟರೇ, ಬೇರೆ ಕೆಲಸ ಬರಲ್ಲ. ಕೊಪ್ಪಳ ಹಾಗೂ ಬಳ್ಳಾರಿ ತಾಂಡ ಭಾಗದಿಂದ ಉದ್ಯೋಗ ಅರಸಿ ಬಂದಿದ್ದಾರೆ. ಸಣ್ಣ ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಬಂದಿದ್ದು, ಶಾಲೆಗೆ ಹೋಗುವ ಮಕ್ಕಳನ್ನು ಊರಿನಲ್ಲಿ ಬಿಟ್ಟು ಬಂದಿದ್ದಾರೆ. ಈ ಜನಾಂಗ ವರ್ಷದ 9 ತಿಂಗಳು ಕಬ್ಬು ಕಟಾವು ಕಾಯಕವನ್ನು ಮಾಡುತ್ತಾರೆ. ಉಳಿದ 3 ತಿಂಗಳನ್ನು ಊರಿನಲ್ಲಿ ಕಾಲ ಕಳೆಯುತ್ತಾರೆ.
ಒಂದು ಟನ್ ಕಬ್ಬು ಕಟಾವು ಮಾಡಿದ್ರೇ ಸಕ್ಕರೆ ಕಾರ್ಖಾನೆಯಿಂದ 350 ರೂ. ಹಾಗೂ ರೈತರಿಂದ 100 ರೂ. ಕೂಲಿ ಪಡೆದುಕೊಳ್ಳುತ್ತಾರೆ. ಮೂರು ತಿಂಗಳು ಹೊಸಪೇಟೆಯಲ್ಲಿದ್ದು ಕಬ್ಬು ಕಟಾವು ಮಾಡುವ ಕಾಯಕ ಮಾಡುತ್ತಾರೆ. ದಾವಣಗೆರೆ, ದುಗ್ಗತ್ತಿ, ಮುಂಡರಿಗಿ ಸೇರಿ ನಾನಾ ಕಡೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಣೆ ಮಾಡಲಾಗುತ್ತದೆ. ಬಯಲಿನಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಾರೆ.
ವಾಸಿಸುವ ಸ್ಥಳದ ಪಕ್ಕಲೇ ಇರುವ ಕಂಬಗಳಿಂದ ತಾತ್ಕಾಲಿಕ ವಿದ್ಯುತ್ ತೆಗೆದುಕೊಂಡು ಟೆಂಟ್‌ಗಳಲ್ಲಿ ಬೆಳಕು ಮಾಡಿಕೊಳ್ಳುತ್ತಾರೆ. ಗಿಡಗಳಿಗೆ ಜೋಳಿಗೆಯನ್ನು ಕಟ್ಟಿ ಸಣ್ಣ ಮಕ್ಕಳನ್ನು ಪೋಷಣೆ ಮಾಡುತ್ತಾರೆ. ಬಿಸಿಲು, ಚಳಿ ಎನ್ನದೇ ಬಯಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಈಟಿವಿ ಭಾರತದೊಂದಿಗೆ ಕೊಪ್ಪಳ ಜಿಲ್ಲೆಯ ಸೂಳೆಕೆರೆ ತಾಂಡದ ತುಲಚಾರಾಮ್ ಚೌಹಾಣ್ ಮಾತನಾಡಿ, ಕಬ್ಬು ಕಟಾವು ಮಾಡಲು ಹೊಸಪೇಟೆಯಿಂದ ಬಂದಿದ್ದೇವೆ. ಮೂರು ತಿಂಗಳವರೆಗೆ ಇದ್ದು ಕೆಲಸ ಮಾಡುತ್ತೇವೆ. ಇಲ್ಲಿ ಕೆಲಸ ಮುಗಿದ ಬಳಿಕ ಮೈಸೂರಿಗೆ ಹೋಗುತ್ತೇವೆ. 9 ತಿಂಗಳು ಕೆಲಸ ಮಾಡಲಾಗುತ್ತೇವೆ. ಉಳಿದ ಮೂರು ತಿಂಗಳು ಊರಲ್ಲಿ ಇರುತ್ತೇವೆ ಎಂದು ಹೇಳಿದರು.