ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ರೈಲು ನಿಲ್ದಾಣ ರಸ್ತೆ ಮಾರ್ಗವಾಗಿ ಹರಿಯುತ್ತಿರುವ ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್ಎಲ್ಸಿ)ಯ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ.
ಕಳೆದೊಂದು ವಾರದಿಂದ ಈ ಎಲ್ಎಲ್ಸಿ ಕಾಲುವೆಯ ಜೀರ್ಣೋದ್ಧಾರ ಕಾರ್ಯ ಜೋರಾಗಿಯೇ ಸಾಗಿದೆ. ನಾಲ್ಕಾರು ಜೆಸಿಬಿ ಯಂತ್ರೋಪಕರಣಗಳು ಹಾಗೂ ಟ್ರ್ಯಾಕ್ಟರ್ಗಳು ಕಾಲುವೆಯೊಳಗಿನ ತ್ಯಾಜ್ಯ ತುಂಬಿರುವ ಹೂಳನ್ನು ಮೇಲೆತ್ತಿ ಬೇರೆಡೆಗೆ ಸಾಗಣೆ ಮಾಡಲಾಗುತ್ತಿದೆ. ಜೂನ್ 6 ರಿಂದ ಶುರುವಾಗುವ ಮುಂಗಾರು ಹಂಗಾಮಿನ ಮಳೆಯು ಆರಂಭವಾಗಲಿದ್ದು, ತುಂಗಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ, ಹಗಲು, ರಾತ್ರಿ ಕಾಲುವೆಯ ಜೀರ್ಣೋದ್ಧಾರ ಕಾರ್ಯ ನಡೆದಿದೆ.
ಕಾಲುವೆಯ ಎರಡೂ ಬದಿ ಗುಣಮಟ್ಟದ ತಡೆಗೋಡೆಗಳನ್ನು ನಿರ್ಮಿಸಲು ತುಂಗಭದ್ರಾ ಜಲಾಶಯದ ಮಂಡಳಿ ಮುಂದಾಗಿದೆ. ಕಳೆದ ವರ್ಷ ಹೊಸಪೇಟೆ ತಾಲೂಕಿನ ಹೊಸೂರು ಗ್ರಾಮದಿಂದ ನಗರದ ರೈಲು ನಿಲ್ದಾಣ ಬಳಿ ಇರುವ ಖಾಸಗಿ ಹೋಟೆಲ್ವರೆಗೆ ಈ ಕಾಲುವೆಯನ್ನು ಗುರುತಿಸಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದ ಕಾಲುವೆ ಜೀರ್ಣೋದ್ಧಾರ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆ ದಿನದಿಂದ ಇಂದಿನವರೆಗೆ ಸತತವಾಗಿ ಕೃಷಿ ಹಾಗೂ ಕುಡಿಯಲು ಕಾಲುವೆಯಿಂದ ನೀರು ಹರಿಸಿದ್ದರಿಂದ ಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯತೆಯಾಗಿರಲಿಲ್ಲ.
ನೀರು ಹರಿದುಹೋಗುವ ರಭಸಕ್ಕೆ ಎಲ್ಲೆಲ್ಲಿ ಕಾಲುವೆ ಹಾಳಾಗಿದೆಯೋ ಅಂತಹ ಸ್ಥಳಗಳನ್ನು ಗುರುತಿಸಿ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಅಂದಾಜು 250 ಕಿ.ಮೀವರೆಗೆ ಅಭಿವೃದ್ಧಿ ಕಾರ್ಯವನ್ನ ಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿಕಾರ್ಯ ಪೂರ್ಣಗೊಳಿಸಲು ಮೂರು ತಿಂಗಳು ಅಂದರೆ ಜುಲೈ ಕೊನೆಯವರೆಗೆ ಕಾಲಾವಕಾಶ ನೀಡಲಾಗಿದೆ. ಹಾಗೊಂದು ವೇಳೆ ಸಕಾಲಕ್ಕೆ ಮುಂಗಾರು ಮಳೆ ಬಂದು ಜಲಾಶಯ ಭರ್ತಿಯಾದ್ರೆ, ಅನಿವಾರ್ಯವಾಗಿ ಕಾಲುವೆಗೆ ನೀರು ಹರಿಸಬೇಕಾಗುತ್ತದೆ. ಹೀಗಾಗಿ, ಕೈಗೆತ್ತಿಕೊಂಡ ಅಭಿವೃದ್ಧಿಕಾರ್ಯವನ್ನು ಪೂರ್ಣಗೊಳಿಸಲು ಮೂರು ತಿಂಗಳ ಗಡುವು ನೀಡಲಾಗಿದೆ.
ಹೊಸಪೇಟೆ ನಗರದ ಸ್ಟೇಷನ್ ರಸ್ತೆಯಿಂದ ನಾಗೇನಹಳ್ಳಿ ವರೆಗೆ ಕಾಲುವೆ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ. ಅಂದಾಜು ಐದಾರು ಜೆಸಿಬಿಗಳು ಕಾಲುವೆಯೊಳಗೆ ಇಳಿದು ತ್ಯಾಜ್ಯ ತುಂಬಿದ ಹೂಳನ್ನು ಹೊರ ತೆಗೆಯುತ್ತಿವೆ. ಅದನ್ನು ಟ್ರ್ಯಾಕ್ಟರ್ ಗಳಲ್ಲಿ ತುಂಬಿಕೊಂಡು ಬೇರೆಡೆಗೆ ಸಾಗಿಸಲಾಗುತ್ತದೆ ಎಂದು ಎಲ್ ಎಲ್ ಸಿ ಕಾಲುವೆ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ ರೆಡ್ಡಿ ತಿಳಿಸಿದ್ದಾರೆ.
ಕಾಲುವೆ ಕೊನೆಯಂಚಿನ ರೈತರಿಗೂ ನೀರು ದೊರಕಬೇಕು. ಇದು ಸಾಧ್ಯ ಆಗಬೇಕಾದ್ರೆ ಕಾಲುವೆ ಸುಸ್ಥಿತಿಯಲ್ಲಿರುವುದು ಬಹುಮುಖ್ಯ. ಹೀಗಾಗಿ, ನಿರಂತರವಾಗಿ ಕಾಲುವೆಯ ಸ್ಥಿತಿಗತಿ ಪರಿಶೀಲನೆ ನಡೆಸಿ, ಎಲ್ಲಾದರೂ ದೋಷ ಕಂಡುಬಂದರೆ ಕೂಡಲೇ ಸರಿದೂಗಿಸುವ ಕಾರ್ಯ ನಡೆಯುತ್ತದೆ ಎಂದರು.