ಹೊಸಪೇಟೆ: ಪಟ್ಟಣದ ಎರವಳ ಓಣಿ ಗುಡಿಸಲು ವಾಸಿಗಳು ಹಲವು ವರ್ಷಗಳಿಂದ ಸಂಕಷ್ಟ ಎದುರಿಸುವಂತಾಗಿದೆ. ಈ ಜನರು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಗೋಳಾಡುವಂತ ಪರಿಸ್ಥಿತಿ ಎದುರಾಗಿದೆ.
ಓಣಿಯ ಕೊನೆಯಲ್ಲಿ ಹತ್ತು ಗುಡಿಸಲು ಮನೆಗಳಿವೆ. ಮಕ್ಕಳು ಸೇರಿದಂತೆ ವಯಸ್ಕ 45 ಜನರು ವಾಸಿಸುತ್ತಿದ್ದಾರೆ. 40 ವರ್ಷಗಳಿಂದ ವಾಸಿಸುತ್ತಿದ್ದು, ಈ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರು ಹೂ-ಹಣ್ಣು ಮಾರಾಟ ಮಾಡಿ ಜೀವನದ ಬಂಡಿಯನ್ನು ಸಾಗಿಸುತ್ತಿದ್ದಾರೆ.
ಕುಡಿಯುವ ನೀರಿಗಾಗಿ ಪರದಾಟ:
ಗುಡಿಸಲು ನಿವಾಸಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ., ನೀರಿಗಾಗಿ ಅಲೆದಾಡುವಂತ ಸ್ಥಿತಿ ಇದೆ. ನೀರಿನ ಬಿಂದಿಗೆಯನ್ನು ಹಿಡಿದುಕೊಂಡು ನೀರು ತರುವ ಸ್ಥಿತಿ ಉದ್ಭವಾಗಿದೆ.
ವಿದ್ಯುತ್ ಸಮಸ್ಯೆ:
ಗುಡಿಸಲುಗಳ ದೂರದಲ್ಲಿ ಒಂದು ವಿದ್ಯುತ್ ಕಂಬವಿದೆ. ಆ ಕಂಬದಿಂದ ತಂತಿಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಪಡೆಯಬೇಕಾಗಿದೆ. ಅಲ್ಲಿಂದ ಮೂರು ಗುಡಿಸಲು ಮನೆಯವರು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಅವರಿಂದ ಏಳು ಗುಡಿಸಲು ಮನೆಯಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿವೆ. ಗುಡಿಸಲು ಸಮೀಪ ಒಂದು ವಿದ್ಯುತ್ ಕಂಬವನ್ನು ಅಳವಡಿಸಿದರೇ ಅನುಕೂಲವಾಗಲಿದೆ. ಅಲ್ಲದೇ, ಗುಡಿಸಲು ಮುಂಭಾಗ ಯಾವುದೇ ಬೀದಿ ದೀಪಗಳು ಇಲ್ಲ. ಭಯದ ವಾತಾವರಣದಲ್ಲಿ ಗುಡಿಸಲು ನಿವಾಸಿಗಳು ಬದುಕುವಂತಾಗಿದೆ.
ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ:
ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ, ಚರಂಡಿ ಛೇಂಬರ್ ಬ್ಲಾಕ್ ಆದರೆ ಜನರ ಸಮಸ್ಯೆ ಹೇಳತೀರದು. ಈ ಸಮಸ್ಯೆಗೆ ಅಧಿಕಾರಿಗಳಿಂದ ಸಂಪೂರ್ಣವಾಗಿ ತಿಲಾಂಜಲಿ ಹಾಡಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳ ನಿಷ್ಕಾಳಜಿ:
ಹಲವು ಬಾರಿ ನಗರಸಭೆ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಅಧಿಕಾರಿಗಳ ಮಾತು ಭರವಸೆಯಲ್ಲಿ ಸಿಮೀತವಾಗಿದೆ. ಸ್ಥಳೀಯ ಶಾಸಕ ಹಾಗೂ ಸಚಿವ ಆನಂದ್ ಸಿಂಗ್ ಅವರು ಸಮಸ್ಯೆ ಕುರಿತು ಗಮನ ಹರಿಸಬೇಕು ಎಂದು ಗುಡಿಸಲು ನಿವಾಸಿಗಳ ಆಗ್ರಹವಾಗಿದೆ.
ಈಟಿವಿ ಭಾರತದೊಂದಿಗೆ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಮಾತನಾಡಿ, ಗುಡಿಸಲು ನಿವಾಸಿಗಳ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಲಾಗುವುದು. ಅಲ್ಲದೆ ಸಮಸ್ಯೆ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.