ಹೊಸಪೇಟೆ: ಬಳ್ಳಾರಿ ಮತ್ತು ಹೊಸಪೇಟೆ ನಗರದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರಿಂದ 73.09 ಲಕ್ಷ ಮೌಲ್ಯದ 1.680 ಕೆಜಿ ಚಿನ್ನ ಮತ್ತು15.33 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬ ಹೇಳಿದರು.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯ ಬಚ್ಚನ್ (27) ವಿವೇಕ್(38) ಎಂಬವರನ್ನು ಮಾ.17ರಂದು ಬಂಧಿಸಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲು ಹೊಸಪೇಟೆಗೆ ಬಂದಿದ್ದೇವೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೆ, ಔರಂಗಬಾದ್ ಜಿಲ್ಲೆಯ ಗಂಗಾಪುರ ತಾಲೂಕಿನ ಪಕೋರ ಗ್ರಾಮದ ಬಾಲುಕಾಳೆ ಮತ್ತು ಅಹಮ್ಮದ್ ನಗರ ಜಿಲ್ಲೆಯ ಜಾಮ್ಘೇಡ್ ನಿವಾಸಿ ರಾಹುಲ್ ಎಂಬವರು ನಮ್ಮೊಂದಿಗೆ ಸೇರಿಕೊಂಡಿದ್ದರು ಎಂದಿದ್ದಾರೆ. ಸದ್ಯ ರಾಹುಲ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಬಳಿಕ ನ್ಯಾಯಾಲಯದ ಅನುಮತಿ ಮೇರೆಗೆ ಮಹಾರಾಷ್ಟ್ರದ ಪಕೋರಕ್ಕೆ ತೆರಳಿ 1.167ಕೆಜಿ ಚಿನ್ನ ಮತ್ತು 12.380 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಇನ್ನೊಂದು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಮಾ.23ರಂದು ಕಳ್ಳತನ ಆರೋಪದಲ್ಲಿ ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಪೊಲೀಸ್ ಅಧಿಕಾರಿಗಳು ಪೆನ್ನಪ್ಪ ಎಂಬಾತನನ್ನು ಬಂಧಿಸಿ, ಆತನಿಂದ 391 ಗ್ರಾಂ ಚಿನ್ನ ಮತ್ತು 2.650 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.