ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ವ್ಯಾಪ್ತಿಯ ದರೋಜಿ ಕೆರೆ ಮೇಲ್ಭಾಗದಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಈ ಕೆರೆಯು ಸಂಪೂರ್ಣ ಭರ್ತಿಯಾಗಿ ಮಳೆಯ ನೀರಿನ ಕೋಡಿ ಹರಿಯುತ್ತಿದೆ.
ದರೋಜಿ ಕೆರೆ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆರೆ ಭರ್ತಿಯಾಗಿ ನೀರಿನ ಕೋಡಿ ಬಿದ್ದು, ಹೆಚ್ಚುವರಿ ನೀರು ಹೊರ ಹೋಗುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆರೆ ಈಗ ಜಲ ಪ್ರಪಾತದ ತಾಣವಾಗಿಯೇ ಮಾರ್ಪಟ್ಟಿದೆ. ಕಂಪ್ಲಿ ಪಟ್ಟಣದ ಡಾ.ರಾಜಕುಮಾರ್ ಜ್ಞಾನ ಮಂದಿರ ಶಾಲೆ ಸೇರಿದಂತೆ ಪಕ್ಕದ ಅರಣ್ಯ ಇಲಾಖೆ ವಸತಿ ಗೃಹಗಳಿಗೆ, ಕರಿ ಬಸಮ್ಮನ ಹಳ್ಳದ ನೀರು ನುಗ್ಗಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಎಲ್ಲೆಂದರಲ್ಲಿ ನೀರು ನುಗ್ಗಿದ ಪರಿಣಾಮ ಸಂತ್ರಸ್ತರೀಗ ಬಯಲಿನಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ.
ಅಷ್ಟೇ ಅಲ್ಲದೇ, ತಾಲೂಕಿನ ಸುಗ್ಗೇನಹಳ್ಳಿ-ಶಾರದಾ ಕಾಲೊನಿಗೆ ಸಂಪರ್ಕ ಕಲ್ಪಿಸುವ ನಾರಿಹಳ್ಳ ಸೇತುವೆ ಮೇಲೆ ನೀರು ಹರಿಯುತ್ತಿದೆ. ಶ್ರೀರಾಮರಂಗಾಪುರದ ಹಳ್ಳ ತುಂಬಿ ಹರಿಯುತ್ತಿದೆ. ಗ್ರಾಮದ ಅಚ್ಚುಕಟ್ಟು ಪ್ರದೇಶದಲ್ಲಿ ನಾಟಿ ಮಾಡಿದ ಮೆಣಸಿನಕಾಯಿ ಬೆಳೆ ಅತಿಯಾದ ತೇವಾಂಶದಿಂದ ಕೊಳೆಯಲು ಆರಂಭಿಸಿದೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ನಂ.10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆ ನೀರು ಗ್ರಾಮದೇವತೆ ಮಾರಮ್ಮ ದೇಗುಲಕ್ಕೆ ನುಗ್ಗಿದೆ. ಆ ಕಾಲುವೆ ನೀರು ರಸ್ತೆಯ ಮೇಲೆಲ್ಲ ಹರಿದಿದ್ದರಿಂದ ವಾಹನ ಸಂಚಾರಕ್ಕೂ ಅಡತಡೆ ಉಂಟಾಗಿದೆ.
ಕಂಪ್ಲಿ ತಹಶೀಲ್ದಾರ್ ಎಂ.ರೇಣುಕಾ ಈ ಮಳೆಯಿಂದ ಹಾನಿಯಾದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಹಾಮಳೆಯಿಂದ ಹಾನಿಯಾದ ಕುಟುಂಬಗಳ ಸಮೀಕ್ಷೆ ಕಾರ್ಯ ನಡೆಸಿ ಅಗತ್ಯ ಪರಿಹಾರ ವಿತರಿಸುವಂತೆ ಮಹಿಳಾ ಸಂಘದ ಮುರಾರಿ ಲಕ್ಷ್ಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.