ಬಳ್ಳಾರಿ: ಜಿಲ್ಲೆಯ ಅಂದಾಜು ಎಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಮೇಲಿಂದ ಮೇಲೆ ಸಾಂಕ್ರಾಮಿಕ ಕಾಯಿಲೆಗಳ ಹರಡುತ್ತಿದ್ದು, ಅದನ್ನು ಶಾಶ್ವತವಾಗಿ ತಡೆಗಟ್ಟಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತೀವ್ರ ನಿಗಾವಹಿಸಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೂಡ ಈ ಕಾರ್ಯಕ್ಕೆ ಸಾಥ್ ನೀಡಿದೆ.
ಹೌದು, ಈಗಾಗಲೇ ಆ ಎಲ್ಲಾ ಗ್ರಾಮಗಳನ್ನು ಸೂಕ್ಷ್ಮ ಗ್ರಾಮಗಳೆಂದು ಗುರುತಿಸಿ ದಿನಾಲೂ ಆಯಾ ಗ್ರಾಮಗಳ ಮನೆಮನೆಗೆ ಜಿಲ್ಲಾ ಮಲೇರಿಯಾ ಅಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಗ್ರಾಮಸ್ಥರಲ್ಲಿ ಈ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟುವ ವಿಧಾನದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಈಗಾಗಲೇ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ, ನೀರು ಸಂಗ್ರಹಣೆ ತೊಟ್ಟಿ ಶುಚಿತ್ವ ಕಾರ್ಯ ಸೇರಿದಂತೆ ಇನ್ನಿತರೆ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮೂಡಿಸುವ ಅಭಿಯಾನವು ಚಾಲ್ತಿಯಲ್ಲಿದೆ.
ಲಾರ್ವ ಸೊಳ್ಳೆಗಳ ಸಂತತಿ ನಿಯಂತ್ರಣಕ್ಕೆ ಅಗತ್ಯಕ್ರಮ:
ಲಾರ್ವ ಸೊಳ್ಳೆಗಳ ಸಂತತಿ ಉತ್ಪತ್ತಿಯಿಂದ ಈ ಡೆಂಗ್ಯು ಕಾಯಿಲೆ ಉಲ್ಬಣಿಸುತ್ತದೆ. ಈ ಲಾರ್ವ ಸೊಳ್ಳೆಗಳ ಸಂತತಿಯನ್ನು ಅಲ್ಲೇ ನಿರ್ನಾಮ ಮಾಡುವ ಕಾರ್ಯವೂ ಈಗಾಗಲೇ ನಡೆದಿದೆ. ಆಗಾಗಿ, ವರ್ಷದಿಂದ ವರ್ಷಕ್ಕೆ ಈ ಡೆಂಗ್ಯು ಕಾಯಿಲೆ ಕಡಿಮೆ ಆಗುತ್ತದೆ ಎಂದು ಜಿಲ್ಲಾ ಮಲೇರಿಯಾಧಿಕಾರಿ ಡಾ.ಅಬ್ದುಲ್ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ. ಈಗಲೂ ಕೂಡ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ತಿಂಗಳಿಗೆ ಮೂರ್ನಾಲ್ಕು ಬಾರಿಯಾದ್ರೂ ಸಾಂಕ್ರಾಮಿಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆಂದು ತಿಳಿಸಿದ್ದಾರೆ.