ವಿಜಯನಗರ: ತಾಲೂಕಿನ ಕಮಲಾಪುರದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ ಅವರು ಹೊಸಪೇಟೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ರಾಘವೇಂದ್ರ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮನೆಯ ಆಧಾರಸ್ತಂಭವನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ರಾಘವೇಂದ್ರ ಅವರು 2005ರಲ್ಲಿ ಕಾನ್ಸ್ಟೇಬಲ್ ಆಗಿ ನೇಮಕವಾಗಿದ್ದರು. ಕಳೆದ 18 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗಷ್ಟೇ ಬಳ್ಳಾರಿಯ ಲೋಕಾಯುಕ್ತ ಕಚೇರಿಯಿಂದ ಕಮಲಾಪುರ ಠಾಣೆಗೆ ವರ್ಗಾವಣೆ ಆಗಿದ್ದರು. ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದು ಸೇವೆ ಸಲ್ಲಿಸುತ್ತಿದ್ದರು.
ವಿಜಯನಗರದ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್, ಡಿವೈಎಸ್ಪಿ ಮಂಜುನಾಥ್ ತಳವಾರ್, ಹಂಪಿ ಸಿಪಿಐ ಕೆ. ಶಿವರಾಜ್ ಅವರು ರಾಘವೇಂದ್ರ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇತ್ತೀಚಿನ ಪ್ರಕರಣ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೃದಯಾಘಾತದಿಂದ ಸಾವು: ಶೋಭಾಯಾತ್ರೆಯ ನಿಮಿತ್ತ ಬಿಗಿ ಭದ್ರತೆ ಒದಗಿಸಲು ನಿಯೋಜನೆಗೊಂಡಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಹಕೀಮುದ್ದೀನ್ ಅವರು ಮೃತಪಟ್ಟ ಸಬ್ ಇನ್ಸ್ಪೆಕ್ಟರ್.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಕೀಮುದ್ದೀನ್ರನ್ನು ರಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ತಂಡದೊಂದಿಗೆ ಬದ್ಕಲಿ ಚೌಕ್‌ನಲ್ಲಿ ಬಿಗಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು. ದಿಢೀರ್ ಹೃದಯಾಘಾತ ಕಾಣಿಸಿಕೊಂಡಿದ್ದರಿಂದ ಹಕೀಮುದ್ದೀನ್ ನಿಧನರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿದ್ದವು. ಹಕೀಮುದ್ದೀನ್ರನ್ನು ಇತ್ತೀಚೆಗಷ್ಟೇ ನಗೀನಾ ಪೊಲೀಸ್ ಠಾಣೆಯಲ್ಲಿ ಹೆಚ್ಚುವರಿ ಎಸ್ಹೆಚ್ಒ ಆಗಿ ನೇಮಕ ಮಾಡಲಾಗಿತ್ತು.
ಇದನ್ನೂ ಓದಿ: ಶಿವನಸಮುದ್ರದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದ ಯುವಕ ಸಾವು : ಮತ್ತೋರ್ವ ಪಾರು
ಸರಕಾರಿ ಶಾಲೆಗೆ ನುಗ್ಗಿ ಉಪಕರಣಗಳಿಗೆ ಹಾನಿ : ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಹರಿದುಹಾಕಿದ ಕಿಡಿಗೇಡಿಗಳು